ADVERTISEMENT

ಟೇಬಲ್‌ ಟೆನಿಸ್‌: ಸಿಂಗಲ್ಸ್‌ನಲ್ಲಿ ಸತ್ಯನ್‌ಗೆ ಕಂಚು

ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ನಿರಾಸೆ

ಪಿಟಿಐ
Published 24 ಮಾರ್ಚ್ 2019, 20:00 IST
Last Updated 24 ಮಾರ್ಚ್ 2019, 20:00 IST
ಜಿ.ಸತ್ಯನ್‌ (ಎಡ) ಮತ್ತು ಅಚಂತಾ ಶರತ್‌ ಕಮಲ್‌
ಜಿ.ಸತ್ಯನ್‌ (ಎಡ) ಮತ್ತು ಅಚಂತಾ ಶರತ್‌ ಕಮಲ್‌   

ಮಸ್ಕತ್‌: ಭಾರತದ ಜಿ.ಸತ್ಯನ್‌ ಅವರು ಐಟಿಟಿಎಫ್‌ ಚಾಲೆಂಜ್‌ ಪ್ಲಸ್‌ ಒಮನ್‌ ಓಪನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸತ್ಯನ್‌ 8–11, 11–7, 9–11, 11–9, 9–11, 11–9, 10–12ರಲ್ಲಿ ಸ್ವೀಡನ್‌ನ ಮಥಿಯಾಸ್‌ ಫ್ಲಾಕ್‌ ಎದುರು ಪರಾಭವಗೊಂಡರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಫ್ಲಾಕ್‌ ಮೊದಲ ಗೇಮ್‌ನಲ್ಲಿ ಮಿಂಚಿನ ಆಟ ಆಡಿದರು. ಆರಂಭಿಕ ನಿರಾಸೆಯಿಂದ ಸತ್ಯನ್‌ ಎದೆಗುಂದಲಿಲ್ಲ. ಎರಡನೇ ಗೇಮ್‌ನಲ್ಲಿ ಎದುರಾಳಿಗೆ ತಿರುಗೇಟು ನೀಡಿದ ಅವರು 1–1 ಸಮಬಲ ಮಾಡಿಕೊಂಡರು.

ADVERTISEMENT

ಮೂರನೇ ಗೇಮ್‌ನಲ್ಲಿ ಫ್ಲಾಕ್‌ ಗೆದ್ದರೆ, ನಾಲ್ಕನೇ ಗೇಮ್‌ ಅನ್ನು ಸತ್ಯನ್‌ ಕೈವಶಮಾಡಿಕೊಂಡರು. ನಂತರದ ಎರಡು ಗೇಮ್‌ಗಳಲ್ಲೂ ಉಭಯ ಆಟಗಾರರು ತಲಾ ಒಂದರಲ್ಲಿ ಗೆದ್ದರು. ಹೀಗಾಗಿ 3–3 ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಏಳನೇ ಗೇಮ್‌ನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿದ್ದ ಸತ್ಯನ್‌ ಮಿಂಚಿನ ಆಟ ಆಡಿ ಗೆಲುವಿನ ಭರವಸೆ ಮೂಡಿಸಿದ್ದರು. ರೋಚಕ ಘಟ್ಟದಲ್ಲಿ ಒತ್ತಡಕ್ಕೆ ಒಳಗಾದಂತೆ ಕಂಡ ಭಾರತದ ಆಟಗಾರ ಎದುರಾಳಿಗೆ ಎರಡು ಪಾಯಿಂಟ್ಸ್‌ ಬಿಟ್ಟುಕೊಟ್ಟು ನಿರಾಸೆ ಕಂಡರು.

ಇದಕ್ಕೂ ಮೊದಲು ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ಸತ್ಯನ್‌ 11–9, 11–7, 11–9, 6–11, 12–10ರಲ್ಲಿ ಫ್ರಾನ್ಸ್‌ನ ಎಮಾನುಯೆಲ್‌ ಲೆಬೆಸನ್‌ಗೆ ಆಘಾತ ನೀಡಿದ್ದರು.

ಪ್ರೀ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ 4–1ರಿಂದ ಅಂಥೋಣಿ ಅಮಲ್‌ರಾಜ್‌ ಅವರನ್ನು ಮಣಿಸಿದ್ದರು.

ಇನ್ನೊಂದು ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಅಚಂತಾ ಶರತ್‌ ಕಮಲ್‌ 1–4ರಲ್ಲಿ ಪುಕಾರ್‌ ಟಾಮಿಸ್ಲಾವ್‌ ಎದುರು ಸೋತರು.

ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸತ್ಯನ್‌ ಮತ್ತು ಶರತ್‌ ಕಮಲ್‌ 2–3ರಲ್ಲಿ ರಷ್ಯಾದ ಡೆನಿಸ್‌ ಇವಾನಿನ್‌ ಮತ್ತು ವ್ಲಾದಿಮಿರ್‌ ಸಿಡೊರೆಂಕೊ ಎದುರು ಪರಾಭವಗೊಂಡರು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಮಧುರಿಕಾ ಪಾಟ್ಕರ್‌ ಮತ್ತು ಹರ್ಮಿತ್‌ ದೇಸಾಯಿ ಅವರೂ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.