ADVERTISEMENT

ರ‍್ಯಾಂಕಿಂಗ್‌: ಅಗ್ರ 20ರೊಳಗೆ ಅಶ್ವಿನಿ–ಸಾತ್ವಿಕ್‌

ಪಿಟಿಐ
Published 2 ಫೆಬ್ರುವರಿ 2021, 11:09 IST
Last Updated 2 ಫೆಬ್ರುವರಿ 2021, 11:09 IST
ಶ್ವಿನಿ ಪೊನ್ನಪ್ಪ (ಎಡ) ಹಾಗೂ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಎಎಫ್‌ಪಿ ಚಿತ್ರ
ಶ್ವಿನಿ ಪೊನ್ನಪ್ಪ (ಎಡ) ಹಾಗೂ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಎಎಫ್‌ಪಿ ಚಿತ್ರ   

ನವದೆಹಲಿ: ಭಾರತ ಬ್ಯಾಡ್ಮಿಂಟನ್‌ನ ಮಿಶ್ರ ಡಬಲ್ಸ್ ವಿಭಾಗದ ಜೋಡಿ ಅಶ್ವಿನಿ ಪೊನ್ನಪ್ಪ– ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಬಿಡಬ್ಲ್ಯುಎಫ್ ರ‍್ಯಾಂಕಿಂಗ್‌ನಲ್ಲಿ ಅಗ್ರ 20ರೊಳಗೆ ಸ್ಥಾನ ಗಳಿಸಿದ್ದಾರೆ. ಇತ್ತೀಚೆಗೆ ಕೊನೆಗೊಂಡ ಏಷ್ಯನ್ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರಿಂದ ಅವರ ಕ್ರಮಾಂಕದಲ್ಲಿ ಏರಿಕೆಯಾಗಿದೆ.

ಕರ್ನಾಟಕದ ಅಶ್ವಿನಿ ಹಾಗೂ ಸಾತ್ವಿಕ್ ಟೊಯೊಟಾ ಥಾಯ್ಲೆಂಡ್ ಓಪನ್ ಟೂರ್ನಿಯಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ, ವಿಶ್ವ ಟೂರ್‌ ಸೂಪರ್ 1000 ಟೂರ್ನಿಯೊಂದರಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎನಿಸಿಕೊಂಡಿದ್ದರು. ಸದ್ಯ 16 ಸ್ಥಾನಗಳ ಏರಿಕೆ ದಾಖಲಿಸಿರುವ ಅವರು 19ನೇ ಸ್ಥಾನದಲ್ಲಿದ್ದಾರೆ.

ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಐದನೇ ಶ್ರೇಯಾಂಕದ ಮಲೇಷ್ಯಾದ ಚೆನ್ ಪೆಂಗ್ ಸೂನ್–ಗೊಹ್‌ ಲಿಯು ಯಿಂಗ್ ಅವರನ್ನು ಪರಾಭವಗೊಳಿಸಿದ್ದರು.

ADVERTISEMENT

ಇದೇ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದ್ದ ಸಾತ್ವಿಕ್–ಚಿರಾಗ್‌ ಶೆಟ್ಟಿ ಜೋಡಿಯು ವಿಶ್ವ ರ‍್ಯಾಂಕಿಂಗ್‌ನಲ್ಲಿ 10ನೇ ಸ್ಥಾನಕ್ಕೆ ಮರಳಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಏಳನೇ ಸ್ಥಾನದಲ್ಲೇ ಮುಂದುವರಿದಿದ್ದರೆ, ಸೈನಾ ನೆಹ್ವಾಲ್‌ ಒಂದು ಸ್ಥಾನ ಏರಿಕೆ ಸಾಧಿಸಿದ್ದು, 19ನೇ ಸ್ಥಾನದಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ 27ನೇ ಸ್ಥಾನದಲ್ಲಿ, ಬಿ.ಸಾಯಿ ಪ್ರಣೀತ್‌ 17ನೇ ಸ್ಥಾನದಲ್ಲಿದ್ದಾರೆ. ಪರುಪಳ್ಳಿ ಕಶ್ಯಪ್ ಅವರ ಸ್ಥಾನ 26.

ಪುರುಷರ ಡಬಲ್ಸ್ ವಿಭಾಗದಲ್ಲಿ ಧೃವ ಕಪಿಲ–ಎಂ.ಆರ್.ಅರ್ಜುನ್‌ 64ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.