ADVERTISEMENT

ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಶಸ್ತಿ ಸುತ್ತಿಗೆ ಸಾತ್ವಿಕ್– ಚಿರಾಗ್‌

ಪಿಟಿಐ
Published 29 ಅಕ್ಟೋಬರ್ 2022, 15:44 IST
Last Updated 29 ಅಕ್ಟೋಬರ್ 2022, 15:44 IST
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಎಎಫ್‌ಪಿ ಚಿತ್ರ
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಎಎಫ್‌ಪಿ ಚಿತ್ರ   

ಪ್ಯಾರಿಸ್‌: ಎದುರಾಳಿಗಳನ್ನು ನೇರ ಗೇಮ್‌ಗಳಿಂದ ಮಣಿಸಿದ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್‌ ತಲುಪಿದ್ದಾರೆ.

ಕಾಮನ್‌ವೆಲ್ತ್ ಚಾಂಪಿಯನ್‌ಗಳಾದ ಸಾತ್ವಿಕ್–ಚಿರಾಗ್ ಜೋಡಿ ಇಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಶನಿವಾರ 21-18, 21-14ರಿಂದ ಕೊರಿಯಾದ ಚೊಯಿ ಸೊಲ್‌ ಗಿವ್– ಕಿಮ್ ವೊನ್ ಹೊ ಅವರನ್ನು ಪರಾಭವಗೊಳಿಸಿದರು.

ಹಣಾಹಣಿಯ ಆರಂಭದಿಂದಲೂ ಉತ್ತಮ ಆಟವಾಡಿದ ಭಾರತದ ಜೋಡಿ 45 ನಿಮಿಷಗಳಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಚುರುಕಿನ ಸ್ಮ್ಯಾಷ್‌ಗಳ ಮೂಲಕ ಗಮನಸೆಳೆದರು. ಇದರೊಂದಿಗೆ ಚಿರಾಗ್– ಸಾತ್ವಿಕ್ ಈ ವರ್ಷ ಎರಡನೇ ಬಾರಿ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಜನವರಿಯಲ್ಲಿ ನಡೆದ ಇಂಡಿಯಾ ಓಪನ್ ಟೂರ್ನಿಯಲ್ಲಿಈ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ADVERTISEMENT

ಆಗಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿರುವ ಸಾತ್ವಿಕ್–ಚಿರಾಗ್‌, ಫೈನಲ್‌ನಲ್ಲಿ ಇಂಗ್ಲೆಂಡ್‌ನ ಬೆನ್‌ ಲೇನ್‌–ಸೀನ್ ವೆಂಡಿ ಮತ್ತು ಚೀನಾ ತೈಪೆಯ ಲು ಚಿಂಗ್‌ ಯಾವೊ ಮತ್ತು ಯಾಂಗ್ ಪೊ ಹಾನ್ ನಡುವಣ ನಾಲ್ಕರ ಘಟ್ಟದ ಪಂದ್ಯದ ವಿಜೇತರನ್ನು ಎದುರಿಸುವರು. ಫೈನಲ್‌ ಭಾನುವಾರ ನಡೆಯಲಿದೆ.

2019ರ ಆವೃತ್ತಿಯಲ್ಲಿ ಭಾರತದ ಜೋಡಿ ಇಲ್ಲಿ ರನ್ನರ್‌ಅಪ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.