ಬ್ಯಾಂಕಾಕ್ (ಪಿಟಿಐ): ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಅಶ್ವಿನಿ ಪೊನ್ನಪ್ಪ ಅವರು ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಓಪನ್ ಟೂರ್ನಿಯಲ್ಲಿ ವೀರೋಚಿತ ಸೋಲು ಅನುಭವಿಸಿದರು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಶನಿವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತದ ಜೋಡಿಯು 20–22, 21–18, 12–21ರಿಂದ ಥಾಯ್ಲೆಂಡ್‌ನ ಡೆಚಾಪೊಲ್ ಪುವಾರ್‌ನುಕ್ರೊ– ಸಪ್‌ಸೈರಿ ತರತ್ತನಚಾಯ್ ಎದುರು ಎಡವಿತು.
ಶ್ರೇಯಾಂಕರಹಿತ ಭಾರತದ ಜೋಡಿ ಎದುರಾಳಿ ಆಟಗಾರರಿಗೆ ಪ್ರಬಲ ಪೈಪೋಟಿಯನ್ನೇ ನೀಡಿತು. ಮೊದಲ ಗೇಮ್‌ನ ವಿರಾಮದ ವೇಳೆಗೆ ಕೇವಲ ಒಂದು ಪಾಯಿಂಟ್ ಹಿಂದಿದ್ದರು. ಬಳಿಕ ಸತತ ಪಾಯಿಂಟ್ಸ್ ಕಲೆಹಾಕಿದ ಥಾಯ್ಲೆಂಡ್ ಆಟಗಾರರು ಗೇಮ್ ತಮ್ಮದಾಗಿಸಿಕೊಂಡರು.
ಎರಡನೇ ಗೇಮ್‌ನಲ್ಲಿ ಸಾತ್ವಿಕ್–ಅಶ್ವಿನಿ ತಿರುಗೇಟು ನೀಡಿದರು. ಮಧ್ಯಂತರದಲ್ಲಿ ಐದು ಪಾಯಿಂಟ್‌ಗಳಿಂದ ಹಿಂದಿದ್ದರೂ ಬಳಿಕ ಪುಟಿದೆದ್ದು 12–12ರ ಸಮಬಲ ಸಾಧಿಸಿದರು. ಒಂದು ಹಂತದಲ್ಲಿ ಎದುರಾಳಿಗಳು ಮುನ್ನಡೆ ಗಳಿಸಿದರೂ ಗೇಮ್ ಗೆಲ್ಲುವಲ್ಲಿ ಭಾರತದ ಜೋಡಿ ಯಶಸ್ವಿಯಾಯಿತು.
ನಿರ್ಣಾಯಕ ಮೂರನೇ ಗೇಮ್‌ನ ಆರಂಭದಲ್ಲೇ ಥಾಯ್ ಜೋಡಿಗೆ ಮುನ್ನಡೆ ಸಿಕ್ಕಿತು. ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದರೂ ವಿರಾಮದ ವೇಳೆಗೆಆತಿಥೇಯ ಆಟಗಾರರ ಮುನ್ನಡೆ 11–9ಕ್ಕೆ ತಲುಪಿತ್ತು. ಬಳಿಕದ ಆಟದಲ್ಲಿ ಥಾಯ್ಲೆಂಡ್ ಜೋಡಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು.
ಸಾತ್ವಿಕ್–ಚಿರಾಗ್‌ಗೂ ಸೋಲು: ಪುರುಷರ ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿದಿದ್ದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿಯೂ ಶನಿವಾರ ಸೋಲು ಅನುಭವಿಸಿತು. ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಭಾರತದ ಜೋಡಿಯು ಸೆಮಿಫೈನಲ್ ಪಂದ್ಯದಲ್ಲಿ 18–21, 18–21ರಿಂದ ಮಲೇಷ್ಯಾದ ಆ್ಯರೋನ್ ಚಿಯಾ–ಸೋ ವುಯಿ ಯಿಕ್ ಎದುರು ಮುಗ್ಗರಿಸಿತು.
ಚಿರಾಗ್ –ಸಾತ್ವಿಕ್ 2018 ಹಾಗೂ 2019ರ ಸೂಪರ್ 1000 ಟೂರ್ನಿಗಳಲ್ಲಿ ಭಾಗವಹಿಸಿದ್ದರೂ ಇದೇ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದರು.
ಮೊದಲ ಗೇಮ್‌ನ ಆರಂಭದಲ್ಲಿ 4–2ರಿಂದ ಮುನ್ನಡೆಯಲ್ಲಿದ್ದ ಭಾರತದ ಜೋಡಿಗೆ ವಿರಾಮದ ವೇಳೆಗೆ ಎದುರಾಳಿಗಳು ತಿರುಗೇಟು ನೀಡಿದರು. 11–10ರಿಂದ ಮಲೇಷ್ಯಾ ಜೋಡಿ ಮುನ್ನಡೆಯಿತು. ಚಿರಾಗ್–ಸಾತ್ವಿಕ್ ಒಂದು ಹಂತದಲ್ಲಿ 15–16ಕ್ಕೆ ತಲುಪಿದ್ದರು. ಆದರೆ ಸತತ ನಾಲ್ಕು ಪಾಯಿಂಟ್ಸ್ ಕಲೆಹಾಕಿದ ಮಲೇಷ್ಯಾ ಜೋಡಿ ಗೇಮ್ ತನ್ನದಾಗಿಸಿಕೊಂಡಿತು.
ಎರಡನೇ ಗೇಮ್‌ನಲ್ಲೂ ಭಾರತದ ಜೋಡಿ 3–1ರಿಂದ ಮುನ್ನಡೆಯಲ್ಲಿತ್ತು. ಮತ್ತೊಮ್ಮೆ ಸತತ ನಾಲ್ಕು ಪಾಯಿಂಟ್ಸ್ ಗಳಿಸಿದ ಆ್ಯರೋನ್ –ಸೋ ವುಯಿ 7–3ಕ್ಕೆ ತಲುಪಿದರು. ಬಳಿಕ ಜಿದ್ದಾಜಿದ್ದಿನ ಪೈಪೋಟಿ ನಡೆದರೂ ಮಲೇಷ್ಯಾ ಜೋಡಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.