ADVERTISEMENT

ಚಿನ್ನಕ್ಕೆ ಮುತ್ತಿಕ್ಕಿದ ಸೆಮೆನ್ಯಾ

ದೋಹಾದಲ್ಲಿ ನಡೆದ ಡೈಮಂಡ್‌ ಲೀಗ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌

ಏಜೆನ್ಸೀಸ್
Published 4 ಮೇ 2019, 16:48 IST
Last Updated 4 ಮೇ 2019, 16:48 IST
ದಕ್ಷಿಣ ಆಫ್ರಿಕಾದ ಕಾಸ್ಟರ್‌ ಸೆಮೆನ್ಯಾ (ಬಲತುದಿ) ಗುರಿಯತ್ತ ಮುನ್ನುಗ್ಗಿದರು –ರಾಯಿಟರ್ಸ್‌ ಚಿತ್ರ
ದಕ್ಷಿಣ ಆಫ್ರಿಕಾದ ಕಾಸ್ಟರ್‌ ಸೆಮೆನ್ಯಾ (ಬಲತುದಿ) ಗುರಿಯತ್ತ ಮುನ್ನುಗ್ಗಿದರು –ರಾಯಿಟರ್ಸ್‌ ಚಿತ್ರ   

ದೋಹಾ: ದಕ್ಷಿಣ ಆಫ್ರಿಕಾದ ಕಾಸ್ಟರ್‌ ಸೆಮೆನ್ಯಾ, ಇಲ್ಲಿ ಶುಕ್ರವಾರ ನಡೆದ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಖಲೀಫಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದ ಮಹಿಳೆಯರ 800 ಮೀಟರ್ಸ್‌ ಓಟದ ಸ್ಪರ್ಧೆಯ ಫೈನಲ್‌ನಲ್ಲಿ ಸೆಮೆನ್ಯಾ, ಒಂದು ನಿಮಿಷ 54.98 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಬುರುಂಡಿಯಾ ಫ್ರಾನ್ಸಿನ್‌ ನಿಯೊನ್‌ಸಬಾ ಬೆಳ್ಳಿಯ ಪದಕ ಪಡೆದರು. ಅವರು ಅಂತಿಮ ರೇಖೆ ಮುಟ್ಟಲು ಒಂದು ನಿಮಿಷ 57.75 ಸೆಕೆಂಡು ತೆಗೆದುಕೊಂಡರು. ಈ ವಿಭಾಗದ ಕಂಚಿನ ಪದಕ ಅಮೆರಿಕದ ಅಜೀ ವಿಲ್ಸನ್‌ ಅವರ ಪಾಲಾಯಿತು. ವಿಲ್ಸನ್‌, ಒಂದು ನಿಮಿಷ 58.83 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ADVERTISEMENT

ಸೆಮೆನ್ಯಾ ಅವರು 800 ಮೀಟರ್ಸ್‌ ವಿಭಾಗದಲ್ಲಿ ಭಾಗವಹಿಸಿದ ಕೊನೆಯ ಸ್ಪರ್ಧೆ ಇದಾಗಿತ್ತು.

ಮಹಿಳಾ ಅಥ್ಲೀಟ್‌ಗಳಲ್ಲಿ ಪುರುಷ ಹಾರ್ಮೋನು ಪ್ರಮಾಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ನ (ಐಎಎಎಫ್‌) ಹೊಸ ನಿಯಮವು ಮೇ 8ಕ್ಕೆ ಜಾರಿಯಾಗಲಿದೆ.

ಐಎಎಎಫ್‌ನ ಹೊಸ ನಿಯಮದಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿ ಸೆಮೆನ್ಯಾ, ಕ್ರೀಡಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅವರ ಮನವಿಯ ವಿರುದ್ಧ ನ್ಯಾಯಾಲಯವು ತೀರ್ಪು ನೀಡಿತ್ತು.

ಚಿಕಿತ್ಸೆಯ ಮೂಲಕ ಹಾರ್ಮೋನ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವಿರಾ ಎಂಬ ಪ್ರಶ್ನೆಗೆ ‘ಖಂಡಿತವಾಗಿಯೂ ಅಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ’ ಎಂದು ಸೆಮೆನ್ಯಾ ಪ್ರತಿಕ್ರಿಯಿಸಿದ್ದಾರೆ.

‘ಮುಂದಿನ ಹಾದಿ ಯಾವುದು ಎಂಬುದು ನನಗಂತೂ ಗೊತ್ತಿಲ್ಲ. ಈ ವಿಷಯದಲ್ಲಿ ಯಾರ ಸಲಹೆಯನ್ನೂ ಕೇಳುವುದಿಲ್ಲ. ಅದರ ಅಗತ್ಯವೂ ನನಗಿಲ್ಲ. ನನ್ನನ್ನು ಇಷ್ಟಪಡುವವರು ಸಾಕಷ್ಟು ಮಂದಿ ಇದ್ದಾರೆ. ಅವರಿಗಾಗಿಯೇ ಬದುಕುತ್ತಿದ್ದೇನೆ. ನನ್ನೆಲ್ಲಾ ಸಾಧನೆಗೆ ಅವರೇ ಸ್ಫೂರ್ತಿ. ಮುಂದೆ ಏನೇ ಸಮಸ್ಯೆ ಬಂದರೂ ದಿಟ್ಟತನದಿಂದಲೇ ಎದುರಿಸುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.