ADVERTISEMENT

ನಾಲ್ಕನೇ ಸುತ್ತಿಗೆ ಲಕ್ಷ್ಯ, ಹರ್ಷಿಲ್‌

ರಾಷ್ಟ್ರೀಯ ಸೀನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 19:39 IST
Last Updated 13 ಫೆಬ್ರುವರಿ 2019, 19:39 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ಗುವಾಹಟಿ : ಪ್ರತಿಭಾನ್ವಿತ ಆಟಗಾರ ಲಕ್ಷ್ಯ ಸೇನ್‌ ಮತ್ತು ಹರ್ಷಿಲ್‌ ದಾನಿ ಅವರು ರಾಷ್ಟ್ರೀಯ ಸೀನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹೋರಾಟದಲ್ಲಿ ಲಕ್ಷ್ಯ 21–14, 21–13 ನೇರ ಗೇಮ್‌ಗಳಿಂದ ವಿಪುಲ್‌ ಸೈನಿ ಎದುರು ಗೆದ್ದರು.

ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದ ಲಕ್ಷ್ಯ, ಎರಡು ಗೇಮ್‌ಗಳಲ್ಲೂ ಪಾರಮ್ಯ ಮೆರೆದರು.

ADVERTISEMENT

17 ವರ್ಷ ವಯಸ್ಸಿನ ಆಟಗಾರ, ಮುಂದಿನ ಸುತ್ತಿನಲ್ಲಿ ಅರಿಂತಾಪ್‌ ದಾಸ್‌ ಗುಪ್ತಾ ಎದುರು ಸೆಣಸಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಹರ್ಷಿಲ್‌ 21–14, 21–15ರಲ್ಲಿ ಏಳನೇ ಶ್ರೇಯಾಂಕದ ಆಟಗಾರ ಬಾಲರಾಜ್‌ ಕಾಜ್ಲಾ ಅವರನ್ನು ಪರಾಭವಗೊಳಿಸಿದರು. ಮುಂದಿನ ಸುತ್ತಿನಲ್ಲಿ ಹರ್ಷಿಲ್‌ಗೆ ಕಾರ್ತಿಕೇಯ ಅವರ ಸವಾಲು ಎದುರಾಗಲಿದೆ.

ಸೌರಭ್‌ ವರ್ಮಾ ಮತ್ತು ರಿತುಪರ್ಣ ದಾಸ್‌ ಅವರೂ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು.

ಸೌರಭ್‌ 18–21, 21–11, 21–15ರಲ್ಲಿ ಎಂಟನೇ ಶ್ರೇಯಾಂಕದ ಆಟಗಾರ ಕೆ.ಜಗದೀಶ್‌ ಅವರನ್ನು ಮಣಿಸಿದರು. ಮುಂದಿನ ಸುತ್ತಿನಲ್ಲಿ ಸೌರಭ್‌, ಮುನಾವರ್‌ ಮೊಹಮ್ಮದ್‌ ಎದುರು ಆಡಲಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ರಿತುಪರ್ಣ 21–14, 21–15ರಲ್ಲಿ ಸಲೋನಿ ಕುಮಾರಿ ಅವರನ್ನು ಸೋಲಿಸಿದರು.

ಗಾಯತ್ರಿ ಗೋಪಿಚಂದ್‌, ರಿಯಾ ಮುಖರ್ಜಿ, ಮಾಳವಿಕ ಬನ್ಸೋಡ್‌, ಶಿಖಾ ಗೌತಮ್‌, ವೈದೇಹಿ ಚೌಧರಿ, ಆದ್ಯ ವರಿಯಾತ್‌, ನಮಿತಾ ಪಠಾನಿಯಾ, ರೇಷ್ಮಾ ಕಾರ್ತಿಕ್‌, ವೈಷ್ಣವಿ ಭಾಲೆ, ನೇಹಾ ಪಂಡಿತ್‌, ಭವ್ಯ ರಿಷಿ, ಶ್ರುತಿ ಮುಂಡಾದ, ಜಿ.ವೃಷಾಲಿ, ದೀಪಾಲಿ ಗುಪ್ತಾ ಮತ್ತು ದೀಪ್‌ಶಿಖಾ ಸಿಂಗ್‌ ಅವರೂ ನಾಲ್ಕನೇ ಸುತ್ತು ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.