ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಹರಿಯಾಣದ ದೇವಿಕಾ ಸಿಹಾಗ್ ಹಾಗೂ ಪುರುಷರ ಸಿಂಗಲ್ಸ್ ಚಾಪಿಯನ್ ಆದ ಕರ್ನಾಟಕ ರಘು ಎಂ ಚಿನ್ನದ ಪದಕದೊಂದಿಗೆ.
ಪ್ರಜಾವಾಣಿ ಚಿತ್ರ / ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ಆತಿಥೇಯ ಕರ್ನಾಟಕ ಆಟಗಾರರ ವ್ಯವಹಾರವಾಗಿದ್ದ ಫೈನಲ್‌ನ ನಿರ್ಣಾಯಕ ಗೇಮ್‌ನಲ್ಲಿ ಮೂರು ಸಲ ಮ್ಯಾಚ್ ಪಾಯಿಂಟ್ ಉಳಿಸಿಕೊಂಡ ಎಂ.ರಘು, ಮಾಜಿ ಚಾಂಪಿಯನ್ ಮಿಥುನ್ ಮಂಜುನಾಥ್ ಅವರನ್ನು ಸೋಲಿಸಿ 86ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಸಭಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ನಲ್ಲಿ, 26 ವರ್ಷ ವಯಸ್ಸಿನ ರಘು 14–21, 21–14, 24–22 ರಿಂದ ಅನುಭವಿ ಮಿಥುನ್ ಅವರ ಸವಾಲನ್ನು ಬದಿಗೊತ್ತಿ ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್ ಕಿರೀಟ ಧರಿಸಿದರು. ಅವರು ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಸತೀಶ್ ಕುಮಾರ್ ಅವರನ್ನು ಹಿಮ್ಮೆಟ್ಟಿಸಿದ್ದರು.
ತೆಲಂಗಾಣದ ಶ್ರೀಯಾನ್ಶಿ ವಲಿಶೆಟ್ಟಿ ಅವರ ಯಶಸ್ಸಿನ ಓಟಕ್ಕೆ ಅಂತ್ಯಹಾಡಿದ ಹರಿಯಾಣದ ದೇವಿಕಾ ಸಿಹಾಗ್ ಮಹಿಳಾ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು. 13ನೇ ಶ್ರೇಯಾಂಕ ಪಡೆದಿದ್ದ ದೇವಿಕಾ 21–15, 21–16ರಲ್ಲಿ ನೇರ ಗೇಮ್‌ಗಳಿಂದ 12ನೇ ಶ್ರೇಯಾಂಕದ ಆಟಗಾರ್ತಿಯ ಮೇಲೆ ಜಯಗಳಿಸಿದರು.
ಎರಡು ವರ್ಷ ಹಿಂದೆ ಇದೇ ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾಗಿದ್ದ ಮಿಥುನ್ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿ ಸುಲಭವಾಗಿಯೇ ತಮ್ಮದಾಗಿಸಿಕೊಂಡರು. ಆದರೆ 26 ವರ್ಷ ವಯಸ್ಸಿನ ರಘು ಎರಡನೇ ಗೇಮ್‌ನಲ್ಲಿ ಸುಧಾರಿಸಿಕೊಂಡು ಮೇಲುಗೈ ಪಡೆಯುವುದರೊಂದಿಗೆ ಪಂದ್ಯ ನಿರ್ಣಾಯಕ ಗೇಮ್‌ಗೆ ಬೆಳೆಯಿತು. ಉತ್ತಮ ಹೋರಾಟದ ಈ ಗೇಮ್‌ನ ಒಂದು ಹಂತದಲ್ಲಿ ರಘು 15–19ರಲ್ಲಿ ಹಿನ್ನಡೆಯಲ್ಲಿದ್ದರೂ, ಸಂಯಮ ವಹಿಸಿ 19–19ರಲ್ಲಿ ಸಮ ಮಾಡಿಕೊಂಡರು.
ಆದರೆ ಮಿಥುನ್ ಅವರಿಗೆ ಮತ್ತೆ ಮುನ್ನಡೆದು ಮೂರು ಬಾರಿ ಮ್ಯಾಚ್ ಪಾಯಿಂಟ್ ಅವಕಾಶ ಗಳಿಸಿದ್ದರು. ಆದರೆ ಈ ನಿರ್ಣಾಯಕ ಹಂತದಲ್ಲಿ ಎಡವಿ ನಿರಾಸೆ ಅನುಭವಿಸಬೇಕಾಯಿತು. ಒತ್ತಡದ ಸಂದರ್ಭವನ್ನು ನಿಭಾಯಿಸಿದ ರಘು ಸುಮಾರು ಒಂದು ಗಂಟೆಯ ಸೆಣಸಾಟದಲ್ಲಿ ಗೆಲುವು ಪಡೆದರು.
ಸಂಸ್ಕಾರ್–ಅರ್ಷ್‌ಗೆ ಡಬಲ್ಸ್ ಕಿರೀಟ: ಜೂನಿಯರ್ ರಾಷ್ಟ್ರೀಯ ಚಾಂಪಿಯನ್ನರಾದ ಸಂಸ್ಕಾರ್ ಸಾರಸ್ವತ್ (ರಾಜಸ್ಥಾನ)– ಅರ್ಷ್ ಮೊಹಮ್ಮದ್ (ಉತ್ತರ ಪ್ರದೇಶ), ಸೀನಿಯರ್ ರಾಷ್ಟ್ರೀಯ ವಿಭಾಗದಲ್ಲೂ ಮೊದಲ ಬಾರಿ ಚಾಂಪಿಯನ್ ಆದರು. ಈ ಜೋಡಿ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ನವೀನ್ ಪಿ. ಮತ್ತು ಲೋಕೇಶ್ ವಿ ಅವರಿಗೆ 12–21, 21–12, 21–19 ರಿಂದ ಆಘಾತ ನೀಡಿತು.
ಆದರೆ ಇತರ ಎರಡು ಡಬಲ್ಸ್ ಫೈನಲ್‌ಗಳಲ್ಲಿ ಅನುಭವವು, ಯುವೋತ್ಸಾಹವನ್ನು ಹಿಮ್ಮೆಟ್ಟಿಸಿತು. ಮಿಶ್ರ ಡಬಲ್ಸ್‌ನಲ್ಲಿ ಎಂಟನೇ ಶ್ರೇಯಾಂಕದ ರೋಹನ್ ಕಪೂರ್– ರುತ್ವಿಕಾ ಶಿವಾನಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಮಹಿಳಾ ಡಬಲ್ಸ್‌ನಲ್ಲಿ ಎರಡನೇ ಶ್ರೇಯಾಕದ ಆರತಿ ಸಾರಾ ಸುನೀಲ್ (ಕೇರಳ)– ವರ್ಷಿಣಿ ವಿ.ಎಸ್. (ತಮಿಳುನಾಡು) ಜೋಡಿ ಫೈನಲ್‌ನಲ್ಲಿ 21–18, 20–22, 21–17 ರಿಂದ ಎಂಟನೇ ಶ್ರೇಯಾಂಕದ ಪ್ರಿಯಾದೇವಿ ಕೊಂಜೆಂಗ್ಬಾಮ್ (ಮಣಿಪುರ)– ಶ್ರುತಿ ಮಿಶ್ರಾ (ಉತ್ತರ ಪ್ರದೇಶ) ಜೋಡಿಯನ್ನು ಸೋಲಿಸಿ ಪ್ರಶಸ್ತಿ ಜಯಿಸಿತು.
ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಆಯುಷ್ ಅಗರವಾಲ್– ಶ್ರುತಿ ಮಿಶ್ರಾ (ಉತ್ತರ ಪ್ರದೇಶ) ಜೋಡಿ 21–17, 21–18 ರಿಂದ ಎಂಟನೇ ಶ್ರೇಯಾಂಕದ ರೋಹನ್ ಕಪೂರ್ (ದೆಹಲಿ)– ರುತ್ವಿಕಾ ಶಿವಾನಿ ಜೋಡಿಯನ್ನು ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.