ADVERTISEMENT

ಡಬಲ್‌ ಚಿನ್ನ ಗೆದ್ದ ಸೌರಭ್‌

ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌: ಭಾರತಕ್ಕೆ ತಂಡ ವಿಭಾಗದಲ್ಲೂ ಪ್ರಥಮ ಸ್ಥಾನ

ಪಿಟಿಐ
Published 8 ನವೆಂಬರ್ 2018, 20:26 IST
Last Updated 8 ನವೆಂಬರ್ 2018, 20:26 IST
ಸೌರಭ್‌ ಚೌಧರಿ
ಸೌರಭ್‌ ಚೌಧರಿ   

ಕುವೈತ್‌: ಸತತವಾಗಿ ಉತ್ತಮ ಸಾಮರ್ಥ್ಯ ತೋರುತ್ತಿರುವ ಭಾರತದ ಯುವ ಶೂಟರ್‌ ಸೌರಭ್ ಚೌಧರಿ, ಏಷ್ಯನ್ ಏರ್‌ಗನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ‘ಡಬಲ್‌’ ಸಾಧನೆ ಮಾಡಿದ್ದಾರೆ. ಗುರುವಾರ ನಡೆದ ಜೂನಿಯರ್ ವಿಭಾಗದ 10 ಮೀಟರ್‌ ಏರ್‌ಗನ್‌ ಸ್ಪರ್ಧೆಯಲ್ಲಿ 239.8 ಸ್ಕೋರ್‌ ಸಂಪಾದಿಸಿದರು. ಫೈನಲ್‌ ಸ್ಪರ್ಧೆಯಲ್ಲಿ ಎಂಟು ಮಂದಿ ಇದ್ದರು.

ಇದಕ್ಕೂ ಮೊದಲು ನಡೆದ ತಂಡ ವಿಭಾಗದ ಸ್ಪರ್ಧೆಯಲ್ಲಿ ಅರ್ಜುನ್ ಸಿಂಗ್ ಚೀಮಾ ಮತ್ತು ಅನ್ಮೋಲ್ ಜೈನ್ ಅವರ ಜೊತೆಗೂಡಿ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಭಾರತ ತಂಡ ಒಟ್ಟು 1731 ಸ್ಕೋರ್ ಗಳಿಸಿತ್ತು.

ಮೀರತ್‌ನ ರೈತನ ಮಗನಾದ 16 ವರ್ಷದ ಸೌರಭ್‌ ಸೆಪ್ಟೆಂಬರ್‌ನಲ್ಲಿ ನಡೆದ್ದಿ ವಿಶ್ವ ಚಾಂಪಿಯನ್‌ಷಿಪ್‌ ಮತ್ತು ನಂತರ ಏಷ್ಯನ್‌ ಕ್ರೀಡಾಕೂಟ, ಯೂತ್ ಒಲಿಂಪಿಕ್ಸ್‌ನಲ್ಲೂ ಚಿನ್ನ ಗಳಿಸಿದ್ದರು. ಗುರುವಾರದ ಸ್ಪರ್ಧೆಯಲ್ಲಿ ಭಾರತದ ಅರ್ಜುನ್‌ 237.7 ಸ್ಕೋರ್ ಸಂಪಾದಿಸಿ ಬೆಳ್ಳಿ ಗೆದ್ದರು. ಚೀನಾ ತೈಪೆಯ ಹಾಂಗ್ ವೀ ಟೀ (218.1) ಕಂಚು ತಮ್ಮದಾಗಿಸಿಕೊಂಡರು.

ADVERTISEMENT

ಅರ್ಹತಾ ಸುತ್ತಿನಲ್ಲಿ ಭಾರತದ ಪ್ರಾಬಲ್ಯ: ಬೆಳಿಗ್ಗೆ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ ಭಾರತ ಪ್ರಾಬಲ್ಯ ಮೆರೆಯಿತು. 60 ಶಾಟ್‌ಗಳ ನಂತರ ಅರ್ಜುನ್‌ 578 ಸ್ಕೋರ್‌ ಗಳಿಸಿ ಅಗ್ರಸ್ಥಾನ ಗಳಿಸಿದರು. ಅನ್ಮೋಲ್ ದ್ವತೀಯ ಮತ್ತು ಸೌರಭ್‌ ಮೂರನೇ ಸ್ಥಾನ ಗಳಿಸಿದ್ದರು. ಗುರುವಾರದ ಅಂತ್ಯಕ್ಕೆ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮೂರು ಚಿನ್ನದೊಂದಿಗೆ ಒಟ್ಟು 10 ಪದಕ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.