ಮಂಗಳೂರು: ಅಗ್ರಕ್ರಮಾಂಕದ ಎದುರಾಳಿಯನ್ನು ಮಣಿಸಿದ ಬೆಂಗಳೂರಿನ ಶೈನಾ ಮಣಿಮುತ್ತು ಅವರು ಶನಿವಾರ ಮುಕ್ತಾಯಗೊಂಡ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 19 ವರ್ಷದೊಳಗಿನ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಎರಡನೇ ಶ್ರೇಯಾಂಕಿತೆಯನ್ನು ಮಣಿಸಿದ ಅವರು ಸೀನಿಯರ್ ಮಹಿಳಾ ವಿಭಾಗದ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.
ನಗರದ ಉರ್ವ ಕ್ರೀಡಾ ಸಂಕೀರ್ಣದಲ್ಲಿ ನಡೆದ ಟೂರ್ನಿಯ 19 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ಶೈನಾ 21–10, 21–9ರಲ್ಲಿ ಮೈಸೂರಿನ ದಿಯಾ ಭೀಮಯ್ಯ ಅವರನ್ನು ಮಣಿಸಿದರು. ಸೀನಿಯರ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ ರಾಜೇಶ್ ವಿರುದ್ಧ 21–18, 21–12ರ ಗೆಲುವು ಸಾಧಿಸಿದರು.
ಪುರುಷರ 19 ವರ್ಷದೊಳಗಿನವರ ಸಿಂಗಲ್ಸ್ ಫೈನಲ್‌ನಲ್ಲಿ ಅಗ್ರ ಕ್ರಮಾಂಕದ ಅಭಿನವ್ ಗರ್ಗ್ 21–12, 21–19ರಲ್ಲಿ ಓಂ ಮಾಕಾ ಎದುರು ಜಯ ಸಾಧಿಸಿದರು. ಸೀನಿಯರ್ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ 4ನೇ ಶ್ರೇಯಾಂಕದ ತುಷಾರ್ ಸುವೀರ್ ವಿರುದ್ಧ 21–11, 21–10ಲ್ಲಿ ಗೆದ್ದು ನಿಕೋಲಸ್ ರಾಜ್ ಪ್ರಶಸ್ತಿಗೆ ಮುತ್ತಿಕ್ಕಿದರು.
ಸಿಂಗಲ್ಸ್ ಮತ್ತು ಮಹಿಳೆಯರ ಡಬಲ್ಸ್‌ನಲ್ಲಿ ಮುಗ್ಗರಿಸಿದರೂ ಮಿಶ್ರ ಡಬಲ್ಸ್‌ನಲ್ಲಿ ದಿಯಾ ಭೀಮಯ್ಯ ಪ್ರಶಸ್ತಿ ಗೆದ್ದರು. ಸುಮಿತ್ ಜೊತೆಗೂಡಿದ ಅವರು ಕ್ರಿಸ್ ಬ್ಯಾಪ್ಟಿಸ್ಟ್ ಮತ್ತು ಮೌನಿತಾ ಜೋಡಿಯನ್ನು 18–21, 21–9, 21–15ರಲ್ಲಿ ಸೋಲಿಸಿದರು.
ಫೈನಲ್ ಪಂದ್ಯಗಳ ಫಲಿತಾಂಶಗಳು ಪುರುಷರ ವಿಭಾಗ: ಸೀನಿಯರ್: ಬೆಂಗಳೂರಿನ ನಿಕೋಲಸ್ ರಾಜ್‌ಗೆ ಬೆಂಗಳೂರಿನ ತುಷಾರ್ ಸುವೀರ್ ಎದುರು 21–11, 21–10ಲ್ಲಿ ಜಯ. 19 ವರ್ಷದೊಳಗಿನವರು: ಬೆಂಗಳೂರಿನ ಅಭಿನವ್ ಗರ್ಗ್‌ಗೆ ಬೆಂಗಳೂರಿನ ಓಂ ಮಾಕಾ ವಿರುದ್ಧ 21–12, 21–19ರಲ್ಲಿ ಜಯ.
ಸೀನಿಯರ್ ಡಬಲ್ಸ್: ಮೈಸೂರಿನ ಕಿಶಲ್ ಗಣಪತಿ–ಸುಮಿತ್‌ಗೆ ಕುಶಾಲ್ ರಾಜ್–ಪ್ರಕಾಶ್ ರಾಜ್ ವಿರುದ್ಧ 21–17, 21–19ರಲ್ಲಿ ಗೆಲುವು. 19 ವರ್ಷದೊಳಗಿನವರು: ಮೈಸೂರಿನ ಅಮಿತ್ ರಾಜ್ ನಟರಾಜ್–ಹಾರ್ದಿಕ್ ದಿವ್ಯಾಂಶ್‌ಗೆ ದಕ್ಷಿಣ ಕನ್ನಡದ ಕ್ರಿಸ್ ಬ್ಯಾಪ್ಟಿಸ್ಟ್–ಮೈಸೂರಿನ ಸುಮಿತ್ ಎ.ಆರ್ ವಿರುದ್ಧ 21–18, 21–17ರಲ್ಲಿ ಗೆಲುವು.
ಮಹಿಳೆಯರು: ಸೀನಿಯರ್: ಬೆಂಗಳೂರಿನ ಶೈನಾ ಮಣಿಮುತ್ತುಗೆ ಲಕ್ಷ್ಯ ರಾಜೇಶ್ ವಿರುದ್ಧ 21–18, 21–12ರಲ್ಲಿ ಜಯ. 19 ವರ್ಷದೊಳಗಿನವರು: ಶೈನಾ ಮಣಿಮುತ್ತುಗೆ ಮೈಸೂರಿನ ದಿಯಾ ಭೀಮಯ್ಯ ವಿರುದ್ಧ 21–10, 21–9ರಲ್ಲಿ ಜಯ. ಸೀನಿಯರ್ ಡಬಲ್ಸ್: ಬೆಂಗಳೂರಿನ ಗ್ಲೋರಿಯಾ ಅಠಾವಳೆ–ಪ್ರೇರಣಾ ಜೋಡಿಗೆ ಮೈಸೂರಿನ ಅಶ್ವತಿ ವರ್ಗೀಸ್–ದಿಯಾ ಭೀಮಯ್ಯ ವಿರುದ್ಧ 21–19, 21–14ರಲ್ಲಿ ಜಯ. 19 ವರ್ಷದೊಳಗಿನವರ ಡಬಲ್ಸ್: ಅಶ್ವತಿ ವರ್ಗೀಸ್–ಲಕ್ಷ್ಯ ರಾಜೇಶ್‌ಗೆ ಬೆಂಗಳೂರಿನ ಇಶಿಕಾ ಕಶ್ಯಪ್–ತನಿಕಾ ಮೋಹನ್ ಎದುರು 21–11, 21–11ರಲ್ಲಿ ಗೆಲುವು.
ಮಿಶ್ರ ವಿಭಾಗ: ಸೀನಿಯರ್: ಪ್ರಕಾಶ್ ರಾಜ್–ಕರ್ಣಿಕ ಶ್ರೀಗೆ ಮೈಸೂರಿನ ಕಿಶಲ್ ಗಣಪತಿ–ರಶ್ಮಿ ಗಣೇಶ್ ವಿರುದ್ಧ 24–22, 24–22ರಲ್ಲಿ ಜಯ. 19 ವರ್ಷದೊಳಗಿನವರು: ಮೈಸೂರಿನ ಸುಮಿತ್ ಎ.ಆರ್–ದಿಯಾ ಭೀಮಯ್ಯಗೆ ಕ್ರಿಸ್ ಬ್ಯಾಪ್ಟಿಸ್ಟ್–ಬೆಂಗಳೂರಿನ ಮೌನಿತಾ ಎ.ಎಸ್ ವಿರುದ್ಧ 18–21, 21–9, 21–15ರಲ್ಲಿ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.