ADVERTISEMENT

ಟಿಟಿ: ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದ ಶರತ್‌, ಒಲಿಂಪಿಕ್ಸ್‌ ಹಾದಿ ಸುಗಮ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 15:51 IST
Last Updated 19 ಮಾರ್ಚ್ 2024, 15:51 IST
ಶರತ್‌ ಕಮಲ್‌
ಶರತ್‌ ಕಮಲ್‌   

ನವದೆಹಲಿ: ಭಾರತದ ಅನುಭವಿ ಟೇಬಲ್‌ ಟೆನಿಸ್‌ ಆಟಗಾರ ಶರತ್‌ ಕಮಲ್‌ ಅವರು ಮಂಗಳವಾರ ಪ್ರಕಟಗೊಂಡ ಐಟಿಟಿಎಫ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ 54 ಸ್ಥಾನಗಳ ಬಡ್ತಿಯೊಂದಿಗೆ 34ನೇ ಸ್ಥಾನಕ್ಕೆ ಏರಿದ್ದಾರೆ. ಹೀಗಾಗಿ, ಅವರಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಹಾದಿ ಸುಗಮವಾಗಿದೆ.

41 ವರ್ಷದ ಶರತ್‌ ಅವರು ಈ ಹಿಂದೆ ದೀರ್ಘಕಾಲ ಅಗ್ರ 50ರಲ್ಲಿ ಸ್ಥಾನ ಪಡೆದಿದ್ದರು. ವಾರದ ಹಿಂದೆ 88ನೇ ಕ್ರಮಾಂಕದಲ್ಲಿದ್ದ ಅವರು ಸಿಂಗಪುರ ಸ್ಮ್ಯಾಶ್ ಟಿಟಿ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಹಂತ ತಲುಪಿದ್ದರು.

ಈ ಹಾದಿಯಲ್ಲಿ ಅವರು 15ನೇ ರ‍್ಯಾಂಕ್‌ನ ಡಾರ್ಕೊ ಜಾರ್ಜಿಕ್ (ಸ್ಲೋವೇನಿಯಾ) ಮತ್ತು 17ನೇ ರ‍್ಯಾಂಕ್‌ನ ಒಮರ್ ಅಸ್ಸಾರ್ (ಈಜಿಪ್ಟ್) ಅವರಿಗೆ ಆಘಾತ ನೀಡಿದ್ದರು. ಹೀಗಾಗಿ, ಕೊನೆಯ ಎಂಟು ಪಂದ್ಯಗಳಿಂದ 400 ಪಾಯಿಂಟ್ಸ್‌ ಸಂಪಾದಿಸಿರುವ ಅವರು, ರ‍್ಯಾಂಕಿಂಗ್‌ನಲ್ಲಿ ಗಣನೀಯವಾಗಿ ಸುಧಾರಿಸಿಕೊಂಡಿದ್ದಾರೆ.

ADVERTISEMENT

ಪುರುಷರ ಸಿಂಗಲ್ಸ್‌ನಲ್ಲಿ ಇಬ್ಬರು ಆಟಗಾರರನ್ನು ಭಾರತ ಟೇಬಲ್ ಟೆನಿಸ್ ಫೆಡರೇಷನ್ ಮೇ 16ರೊಳಗೆ ಅವರ ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆಯ್ಕೆ ಮಾಡುತ್ತದೆ. ಪ್ರಸ್ತುತ ಶರತ್‌ ಮತ್ತು ಹರ್ಮೀತ್ ದೇಸಾಯಿ (65ನೇ ರ‍್ಯಾಂಕ್‌) ಮೊದಲೆರಡು ಸ್ಥಾನದಲ್ಲಿದ್ದಾರೆ.

ಭಾರತದ ಪುರುಷ ಮತ್ತು ಮಹಿಳಾ ಟೇಬಲ್‌ ಟೆನಿಸ್‌ ತಂಡಗಳು ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಈಗಾಗಲೇ ಇತಿಹಾಸ ಬರೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.