ADVERTISEMENT

ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಭಾರತೀಯರ ಗುರಿ

ಇಂದಿನಿಂದ ಕತಾರ್‌ನಲ್ಲಿ ಏಷ್ಯನ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:31 IST
Last Updated 4 ನವೆಂಬರ್ 2019, 19:31 IST

ಲುಸಾಲಿ, ಕತಾರ್‌: ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯೊಂದಿಗೆಭಾರತದ ಶೂಟರ್‌ಗಳು 14ನೇ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಲುಸಾಲಿ ಶೂಟಿಂಗ್‌ ಕೇಂದ್ರದಲ್ಲಿ ಮಂಗಳವಾರದಿಂದ ನವೆಂಬರ್‌ 13ರವರೆಗೆ ಚಾಂಪಿಯನ್‌ಷಿಪ್‌ ನಡೆಯಲಿದೆ.

ಸೀನಿಯರ್‌, ಜೂನಿಯರ್‌ ಹಾಗೂ ಯೂತ್‌ ವಿಭಾಗ ಸೇರಿ ಭಾರತದ ಒಟ್ಟು 63 ಪುರುಷ ಮತ್ತು 45 ಮಹಿಳಾ ಸ್ಪರ್ಧಿಗಳು ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿಯಲ್ಲಿ 38 ಒಲಿಂಪಿಕ್ಸ್‌ ಸ್ಥಾನಗಳಿಗೆ ಅರ್ಹತೆ ಪಡೆಯಬಹುದಾಗಿದೆ.

ADVERTISEMENT

ರೈಫಲ್‌ ಹಾಗೂ ಪಿಸ್ತೂಲ್‌ ಸ್ಪರ್ಧೆಗಳಲ್ಲಿ ಭಾರತ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ನ 9 ಸ್ಥಾನಗಳಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿದೆ. ಚೀನಾ (25 ಸ್ಥಾನಗಳು), ಜಪಾನ್‌ (12) ಹಾಗೂ ಕೊರಿಯಾ (12)ದೇಶಗಳ ನಂತರದ ಸ್ಥಾನದಲ್ಲಿದೆ.

ಮಂಗಳವಾರ ನಡೆಯುವ ಮೊದಲ ದಿನದ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳಿಗೆ ಒಂದು ಕೋಟಾ ಸ್ಥಾನ ಪಡೆಯಲು ಮಾತ್ರ ಅವಕಾಶವಿದೆ. 10 ಮೀಟರ್ ಏರ್‌ ರೈಫಲ್‌ನಲ್ಲಿ ಯಶ್‌ ವರ್ಧನ್‌ ಹಾಗೂ ದೀಪಕ್‌ ಕುಮಾರ್‌ ಭರವಸೆಯಾಗಿದ್ದಾರೆ.

ಮೊದಲ ದಿನ ನಡೆಯುವ ಮಹಿಳಾ ವಿಭಾಗದ 10 ಮೀ. ಏರ್‌ ಪಿಸ್ತೂಲ್‌ ಹಾಗೂ ಶೂಟಿಂಗ್‌ ಸ್ಪರ್ಧೆಗಳಲ್ಲಿ ಪಾರಮ್ಯ ಮೆರೆಯಲು ಭಾರತದ ಶೂಟರ್‌ಗಳು ಸಜ್ಜಾಗಿದ್ದಾರೆ.

ಅಪೂರ್ವಿ ಚಾಂಡೇಲ ಮತ್ತು ಅಂಜುಮ್‌ ಮೌದ್ಗಿಲ್‌ (ಮಹಿಳೆಯರ 10 ಮೀ. ಏರ್‌ ರೈಫಲ್‌), ಸೌರಭ್‌ ಚೌಧರಿ ಹಾಗೂ ಅಭಿಷೇಕ್‌ ವರ್ಮಾ (ಪುರುಷರ 10 ಮೀ. ಏರ್‌ ಪಿಸ್ತೂಲ್‌), ಮನು ಭಾಕರ್‌ ಹಾಗೂ ಯಶಸ್ವಿನಿ ಸಿಂಗ್‌ ದೇಸ್ವಾಲ್‌ (ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌), ರಾಹಿ ಸರ್ನೋಬತ್‌ ( ಮಹಿಳೆಯರ 25 ಮೀ. ಪಿಸ್ತೂಲ್‌), ಸಂಜೀವ್‌ ರಾಜಪೂತ್‌ (ಪುರುಷರ 50 ಮೀ. ರೈಫಲ್‌ 3 ಪೋಸಿಷನ್ಸ್) ಹಾಗೂ ದಿವ್ಯಾನ್ಷ್‌ ಸಿಂಗ್‌ ಪಾನ್ವರ್‌ (ಪುರುಷರ 10 ಮೀ. ಏರ್‌ ರೈಫಲ್‌) ಅವರುಟೋಕಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಈ ಚಾಂಪಿಯನ್‌ಷಿಪ್‌ನಲ್ಲಿ ಅವರಿಗೆ ಹೆಚ್ಚಿನ ಸ್ಥಾನ ಪಡೆಯಲು ಅವಕಾಶವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.