ADVERTISEMENT

ಇಂಡೊನೇಷ್ಯಾ ಓಪನ್‌: ಪಿ.ವಿ. ಸಿಂಧು ಶುಭಾರಂಭ

ಪಿಟಿಐ
Published 3 ಜೂನ್ 2025, 13:35 IST
Last Updated 3 ಜೂನ್ 2025, 13:35 IST
ಭಾರತದ ಪಿ.ವಿ. ಸಿಂಧು
ಭಾರತದ ಪಿ.ವಿ. ಸಿಂಧು   

ಜಕಾರ್ತ: ಭಾರತದ ತಾರೆ ಪಿ.ವಿ. ಸಿಂಧು ಅವರು ಮಂಗಳವಾರ ಆರಂಭವಾದ ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದರು. ಆದರೆ, ಲಕ್ಷ್ಯಸೇನ್‌ ಮೊದಲ ಸುತ್ತಿನಲ್ಲೇ ಹೊರಬಿದ್ದರು. 

ಒಲಿಂಪಿಕ್ ಡಬಲ್‌ ಪದಕ ವಿಜೇತೆ ಸಿಂಧು ಮಹಿಳೆಯರ ಸಿಂಗಲ್ದ್‌ನ ಮೊದಲ ಸುತ್ತಿನಲ್ಲಿ 22-20, 21-23, 21-15ರ ಮೂರು ಗೇಮ್‌ಗಳ ಹೋರಾಟದಲ್ಲಿ ಜಪಾನ್‌ನ ನೊಜೊಮಿ ಒಕುಹರಾ ಅವರನ್ನು ಸೋಲಿಸಿದರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿರುವ ಸಿಂಧು ಅವರಿಗೆ ಮುಂದಿನ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಿದೆ. ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಪೋರ್ನ್‌ಪವಿ ಚೋಚುವಾಂಗ್ (ಥಾಯ್ಲೆಂಡ್‌) ಅವರೊಂದಿಗೆ ಸೆಣಸಲಿದ್ದಾರೆ.

ADVERTISEMENT

2021ರ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಸೇನ್‌ ಪುರುಷರ ಸಿಂಗಲ್ಸ್‌ನಲ್ಲಿ 11-21, 22-20, 15-21 ಅವರು ವಿಶ್ವದ ಎರಡನೇ ಕ್ರಮಾಂಕದ ಶಿ ಯು ಕಿ (ಚೀನಾ) ಅವರಿಗೆ ಸೋತರು. ಬೆನ್ನುನೋವಿನ ಕಾರಣಕ್ಕೆ ಮಲೇಷ್ಯಾ ಓಪನ್‌ ಟೂರ್ನಿಯಿಂದ ಹೊರಗುಳಿದಿದ್ದ 23 ವರ್ಷದ ಸೇನ್‌ ಚೇತರಿಸಿಕೊಂಡು ಇಲ್ಲಿ ಉತ್ತಮ ಹೋರಾಟ ತೋರಿದರು. 

ಒಟ್ಟು ₹12.41 ಕೋಟಿ ಬಹುಮಾನ ಮೊತ್ತವನ್ನು ಹೊಂದಿರುವ ಟೂರ್ನಿಯಲ್ಲಿ ಭಾರತದ ಮತ್ತೊಬ್ಬ ಆಟಗಾರ ಎಚ್.ಎಸ್‌. ಪ್ರಣಯ್‌ 17-21, 18-21 ಅಂತರದಲ್ಲಿ ಆತಿಥೇಯ ಇಂಡೊನೇಷ್ಯಾದ ಅಲ್ವಿ ಫರ್ಹಾನ್ ಅವರಿಗೆ ಮಣಿದರು. 

ಉದಯೋನ್ಮುಖ ಆಟಗಾರ್ತಿಯರಾದ ಮಾಳವಿಕಾ ಬನ್ಸೋಡ್, ಅನುಪಮಾ ಉಪಾಧ್ಯಾಯ ಮತ್ತು ರಕ್ಷಿತಾ ರಾಮರಾಜ್‌ ಮೊದಲ ಸುತ್ತಿನಲ್ಲೇ ಅಭಿಯಾನ ಮುಗಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.