ADVERTISEMENT

ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಭಾರತದ ಸಿಂಧು ಮೇಲೆ ನಿರೀಕ್ಷೆ

ಕಣದಲ್ಲಿ ಸೈನಾ, ಶ್ರೀಕಾಂತ್; ಖ್ಯಾತ ನಾಮರ ಗೈರು

ಪಿಟಿಐ
Published 16 ಮಾರ್ಚ್ 2021, 21:39 IST
Last Updated 16 ಮಾರ್ಚ್ 2021, 21:39 IST
ಪಿ.ವಿ. ಸಿಂಧು
ಪಿ.ವಿ. ಸಿಂಧು   

ಬರ್ಮಿಂಗ್‌ಹ್ಯಾಮ್: ವಿಶ್ವ ಚಾಂಪಿಯನ್, ಭಾರತದ ಪಿ.ವಿ. ಸಿಂಧು ಬುಧವಾರ ಇಲ್ಲಿ ಆರಂಭವಾಗಲಿರುವ ಆಲ್‌ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಈಚೆಗೆ ಸ್ವಿಸ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಸಿಂಧು ಸ್ಪೇನ್‌ನ ಕ್ಯಾರೊಲಿನಾ ಮರಿನ್ ಎದುರು ಸೋತಿದ್ದರು. ಆದರೆ ಗಾಯಗೊಂಡಿರುವ ಮರಿನ್ ಅವರು ಆಲ್‌ ಇಂಗ್ಲೆಂಡ್‌ನಲ್ಲಿ ಕಣಕ್ಕಿಳಿಯುತ್ತಿಲ್ಲ.

ಅಲ್ಲದೆ ಚೀನಾ, ಕೊರಿಯಾ ಮತ್ತು ತೈಪೆಯ ಬ್ಯಾಡ್ಮಿಂಟನ್ ಪಟುಗಳು ಇಲ್ಲಿ ಆಡುತ್ತಿಲ್ಲ. ಇದೇ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನ ಕ್ವಾಲಿಫೈಯರ್ ಸುತ್ತಿನ ಭಾಗವಾಗಿ ಈ ಸೂಪರ್ 1000 ಟೂರ್ನಿಯನ್ನು ಪರಿಗಣಿಸಲಾಗಿಲ್ಲ. ಆದ್ದರಿಂದ ಬಹುತೇಕ ಅಗ್ರಕ್ರಮಾಂಕದ ಆಟಗಾರರು ಹಿಂದೆ ಸರಿದಿದ್ದಾರೆ.

ADVERTISEMENT

ಆದ್ದರಿಂದ ಸಿಂಧು ನೇತೃತ್ವದ 19 ಆಟಗಾರರ ಭಾರತ ತಂಡಕ್ಕೆ ಇಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಹೆಚ್ಚಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಕನ್ನಡಿಗ ಪ್ರಕಾಶ್ ಪಡುಕೋಣೆ (1980) ಮತ್ತು ಹೈದರಾಬಾದಿನ ಪಿ. ಗೋಪಿಚಂದ್ (2001) ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಮಹಿಳೆಯರ ವಿಭಾಗದಲ್ಲಿ 2015ರಲ್ಲಿ ಸೈನಾ ನೆಹ್ವಾಲ್ ರನ್ನರ್ ಅಪ್ ಆಗಿದ್ದು ಶ್ರೇಷ್ಠ ಸಾಧನೆಯಾಗಿದೆ. 2018ರಲ್ಲಿ ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದರು.

ಈ ಬಾರಿ ಐದನೇ ಶ್ರೇಯಾಂಕದ ಸಿಂಧು ತಮ್ಮ ಮೊದಲ ಪಂದ್ಯದಲ್ಲಿ ಮಲೇಷ್ಯಾದ ಸೋನಿಯಾ ಚೀಹ್ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ಫೈನಲ್ ಪ್ರವೇಶಿಸಿದರೆ ಜಪಾನಿನ ಅಕಾನೆ ಯಮಾಗುಚಿ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಲಂಡನ್ ಒಲಿಂಪಿಕ್ಸ್‌ ಪದಕವಿಜೇತೆ ಸೈನಾ ಅವರು ಇಲ್ಲಿ ತಮ್ಮ ಮೊದಲ ಹಣಾಹಣಿಯಲ್ಲಿ ಏಳನೇ ಶ್ರೇಯಾಂಕದ ಮಿಯಾ ಬ್ಲಿಚ್‌ಫೀಲ್ಡ್‌ ಅವರ ವಿರುದ್ಧ ಕಣಕ್ಕಿಳಿಯುವರು.

ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ ಮತ್ತು ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಅವರು ಭರವಸೆಯ ಆಟಗಾರರಾಗಿದ್ದಾರೆ. 10ನೇ ಶ್ರೇಯಾಂಕದ ಈ ಜೋಡಿಯು ಸ್ವಿಸ್‌ ಓಪನ್‌ನಲ್ಲಿ ಚೆನ್ನಾಗಿ ಆಡಿದ್ದರು.

ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಅವರಿಗೆ ಮೊದಲ ಸುತ್ತಿನಲ್ಲಿ ಇಂಡೋನೆಷ್ಯಾದ ಟಾಮಿ ಸುಗಾರ್ಥೊ ಸವಾಲೊಡ್ಡುವರು. ಬಿ. ಸಾಯಿ ಪ್ರಣಿತ್, ಫ್ರಾನ್ಸ್‌ನ ಟೋಮೊ ಜೂನಿಯರ್ ಪೊಪೊವ್ ವಿರುದ್ಧ ಆಡುವರು.

ಪರುಪಳ್ಳಿ ಕಶ್ಯಪ್ ಅವರು ಜಪಾನಿನ ಕೆಂಟೊ ಮೊಮೊಟಾ ವಿರುದ್ಧ ಆಡುವರು. ಮೊಮೊಟಾ ಹೋದ ವರ್ಷ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದರ ನಂತರ ಅವರು ಕೊರೊನಾ ಸೋಂಕಿನಿಂದಲೂ ಬಳಲಿದ್ದರು.

ಸಮೀರ್ ವರ್ಮಾ ಬ್ರೆಜಿಲ್‌ನ ವೈಗರ್ ಕೊಯಲ್ಹೊ ವಿರುದ್ಧ; ಯುವ ಆಟಗಾರ ಲಕ್ಷ್ಯ ಸೇನ್ ಥಾಯ್ಲೆಂಡ್‌ನ ಕೆಂಟಾಫೋನ್ ವಾಂಗ್‌ಚರೋನ್ ವಿರುದ್ಧ ಆಡುವರು. ಡಬಲ್ಸ್‌ನಲ್ಲಿ ಸಾತ್ವಿಕ್–ಚಿರಾಗ್ ಜೋಡಿಯು ಫ್ರಾನ್ಸ್‌ನ ಎಲೊಯ್ ಆ್ಯಡಂ ಹಾಗೂ ಜೂಲಿಯನ್ ಮಯೊ ವಿರುದ್ಧ ಆಡಲಿದೆ.

ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ ಜಪಾನ್ ಜೋಡಿ ಯೂಕಿ ಕಾನೆಕೊ ಮತ್ತು ಮಿಸಾಕಿ ಮಾತ್ಸುಟೊಮೊ ವಿರುದ್ಧ ಕಣಕ್ಕಿಳಿಯುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.