ADVERTISEMENT

ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ಸಿಂಧು ಲಗ್ಗೆ

ಅಸ್ಮಿತಾ ಸವಾಲು ಅಂತ್ಯ

ಪಿಟಿಐ
Published 14 ಜನವರಿ 2022, 12:35 IST
Last Updated 14 ಜನವರಿ 2022, 12:35 IST
ಪಿ.ವಿ.ಸಿಂಧು– ಪಿಟಿಐ ಚಿತ್ರ
ಪಿ.ವಿ.ಸಿಂಧು– ಪಿಟಿಐ ಚಿತ್ರ   

ನವದೆಹಲಿ: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಪಿ.ವಿ.ಸಿಂಧು, ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅವರು ಸ್ವದೇಶದ ಪ್ರತಿಭೆ ಅಸ್ಮಿತಾ ಚಲಿಹಾ ಅವರನ್ನು ಮಣಿಸಿದರು.

ಇಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಮಾಜಿ ವಿಶ್ವ ಚಾಂಪಿಯನ್ ಆಟಗಾರ್ತಿ, ಮಹಿಳಾ ಸಿಂಗಲ್ಸ್ ವಿಭಾಗದ 36 ನಿಮಿಷಗಳ ಪಂದ್ಯದಲ್ಲಿ21-7 21-18ರಿಂದ ಅಸ್ಮಿತಾ ಸವಾಲು ಮೀರಿದರು. ನಾಲ್ಕರ ಘಟ್ಟದ ಸೆಣಸಾಟದಲ್ಲಿ ಅವರಿಗೆ ಆರನೇ ಶ್ರೇಯಾಂಕದ, ಥಾಯ್ಲೆಂಡ್‌ನ ಸುಪನಿದಾ ಕೇಟ್‌ಥೊಂಗ್ ಮುಖಾಮುಖಿಯಾಗಲಿದ್ದಾರೆ.

ಸಿಂಗಪುರದ ಯೊ ಜಿಯಾ ಮಿನ್ ಅವರು ‘ತೀವ್ರ ಜ್ವರ‘ದ ಕಾರಣ ಕ್ವಾರ್ಟರ್‌ಫೈನಲ್‌ ಪಂದ್ಯದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಅವರ ಎದುರಾಳಿಯಾಗಿದ್ದ ಸುಪನಿದಾ ಸೆಮಿಫೈನಲ್‌ ತಲುಪಿದರು.

ADVERTISEMENT

2019ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅಸ್ಮಿತಾ ಎದುರು ಆಡಿದ್ದ ಸಿಂಧು ಅವರು ಗೆಲುವು ಸಾಧಿಸಿದ್ದರು. ಆಗ ಅಸ್ಸಾಂನ 20 ವರ್ಷದ ಆಟಗಾರ್ತಿಯು ತೋರಿದ ಸಾಮರ್ಥ್ಯ ಗಮನಸೆಳೆದಿತ್ತು.

ಶುಕ್ರವಾರದ ಪಂದ್ಯದ ಎರಡನೇ ಗೇಮ್‌ನಲ್ಲಿ ಹೈದರಾಬಾದ್‌ನ ಸಿಂಧು ಅವರಿಗೆ ಅಸ್ಮಿತಾ ತೀವ್ರ ಪ್ರತಿರೋಧ ತೋರಿದರು. ಆದರೆ ಗೆಲುವು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮೊದಲ ಗೇಮ್‌ನ ವಿರಾಮದ ಹೊತ್ತಿಗೆ 11–5ರಿಂದ ಮುನ್ನಡೆಯಲ್ಲಿದ್ದ ಸಿಂಧು ಬಳಿಕವೂ ಪಾರಮ್ಯ ಮೆರೆದರು. ಎರಡನೇ ಗೇಮ್‌ ಒಂದು ಹಂತದಲ್ಲಿ 9–9ರಿಂದ ಸಮಬಲವಾಗಿತ್ತು. ವಿರಾಮದ ವೇಳೆಗೆ ಸಿಂಧು ಒಂದು ಪಾಯಿಂಟ್ಸ್‌ನ ಮುನ್ನಡೆಯಲ್ಲಿದ್ದರು. ಬಳಿಕ ಈ ಮುನ್ನಡೆಯನ್ನು 15–11ಕ್ಕೆ ಕೊಂಡೊಯ್ದರು. ತಿರುಗೇಟು ನೀಡಿದ ಅಸ್ಮಿತಾ 15–15ರ ಸಮಬಲ ಸಾಧಿಸಿದರು. ಈ ಹಂತದಲ್ಲಿ ಆಟದ ‘ಗೇರ್‌‘ ಬದಲಾಯಿಸಿದ ಸಿಂಧು ಸತತ ನಾಲ್ಕು ಪಾಯಿಂಟ್ಸ್ ಕಲೆಹಾಕಿದರು. ಪಂದ್ಯ ಮುಗಿಯುವ ಮೊದಲು ಅಸ್ಮಿತಾ ಎರಡು ಮ್ಯಾಚ್‌ ಪಾಯಿಂಟ್ಸ್ ಉಳಿಸಿಕೊಳ್ಳಲು ಮಾತ್ರ ಸಾಧ್ಯವಾಯಿತು.

ಆಕರ್ಷಿಗೆ ಬುಸಾನನ್‌ ಎದುರಾಳಿ: ಮಹಿಳಾ ಸಿಂಗಲ್ಸ್‌ನ ಮತ್ತೊಂದು ಸೆಮಿಫೈನಲ್‌ನಲ್ಲಿ ಭಾರತದ ಆಕರ್ಷಿ ಕಶ್ಯಪ್ ಅವರು ಥಾಯ್ಲೆಂಡ್‌ ಆಟಗಾರ್ತಿ, ಎರಡನೇ ಶ್ರೇಯಾಂಕದ ಬುಸಾನನ್‌ ಒಂಗ್‌ಬಮ್ರುಂಗ್‌ಪನ್‌ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಆಕರ್ಷಿ21-12, 21-15ರಿಂದ ಭಾರತದವರೇ ಆದ ಮಾಳವಿಕಾ ಬಾನ್ಸೋದ್ ಅವರನ್ನು ಸೋಲಿಸಿದರು. ಬುಸಾನನ್‌ 21-12, 21-8ರಿಂದ ಅಮೆರಿಕದ ಲಾರೆನ್‌ ಲಾಮ್‌ ಅವರನ್ನು ಮಣಿಸಿದರು.

ಪುರುಷರ ಡಬಲ್ಸ್ ಜೋಡಿ ಇಶಾನ್ ಭಟ್ನಾಗರ್‌ ಮತ್ತು ಸಾಯಿ ಪ್ರತೀಕ್7-21, 7-21ರಿಂದ ಮಲೇಷ್ಯಾದ ಒಂಗ್‌ ಯಿವ್‌ ಸಿನ್‌ ಮತ್ತು ಟಿಯೊ ಈ ಯಿ ಎದುರು ನಿರಾಸೆ ಅನುಭವಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ವೆಂಕಟ ಗೌರವ್ ಪ್ರಸಾದ್‌– ಜೂಹಿ ದೇವಾಂಗನ್ ಕೂಡ10-21, 13-21ರಿಂದ ಮಲೇಷ್ಯಾದ ಚೆನ್ ತಾಂಗ್‌ ಜೀ ಮತ್ತು ಪೆಕ್‌ ಯೆನ್ ವೇ ಎದುರು ಸೋಲನುಭವಿಸಿದರು. ನಿತಿನ್‌ ಎಚ್‌.ವಿ. ಮತ್ತು ಅಶ್ವಿನಿ ಭಟ್‌ ಕೆ.15-21 19-21ರಿಂದ ಸಿಂಗಪುರದ ಹೀ ಯೊಂಗ್‌ ಕಾಯ್‌ ಟೆರಿ ಮತ್ತು ತಾನ್‌ ವೇ ಹಾನ್‌ ಎದುರು ಎಡವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.