ADVERTISEMENT

ಮಲೇಷ್ಯಾ ಮಾಸ್ಟರ್ಸ್: ಸಿಂಧು ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

ಪಿಟಿಐ
Published 7 ಜುಲೈ 2022, 10:57 IST
Last Updated 7 ಜುಲೈ 2022, 10:57 IST
ಪಿ.ವಿ. ಸಿಂಧು
ಪಿ.ವಿ. ಸಿಂಧು   

ಕ್ವಾಲಾಲಂಪುರ: ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ. ಸಿಂಧು, ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಸಿಂಧು ಅವರು ಚೀನಾದ ಜಾಂಗ್ ಯಿ ಮಾನ್ ವಿರುದ್ಧ, 21-12, 21-10ರ ನೇರ ಅಂತರದಲ್ಲಿ ಜಯ ಗಳಿಸಿದರು.

ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಹೊಂದಿರುವ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು, ವಿಶ್ವ ರ‍್ಯಾಂಕ್‌ 32ನೇ ಆಟಗಾರ್ತಿ ಜಾಂಗ್ ಯಿ ವಿರುದ್ಧ ಕೇವಲ 28 ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡರು.

ಎಂಟರ ಘಟ್ಟದಲ್ಲಿ ಸಿಂಧು ಅವರಿಗೆ ಕಠಿಣ ಸವಾಲು ಎದುರಾಗಲಿದ್ದು, ವಿಶ್ವ ನಂ. 2 ರ‍್ಯಾಂಕ್‌‌ನ ಚೈನೀಸ್ ತೈಪೆಯ ತಾಯ್ ತ್ಸು ಯಿಂಗ್ ಸವಾಲನ್ನು ಎದುರಿಸಲಿದ್ದಾರೆ.

ಕಳೆದ ವಾರ ನಡೆದ ಮಲೇಷ್ಯಾ ಓಪನ್ ಟೂರ್ನಿಯಲ್ಲಿ ತಾಯ್ ವಿರುದ್ಧವೇ ಸಿಂಧು ಸೋಲು ಅನುಭವಿಸಿದ್ದರು. ಈಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.

ಏತನ್ಮಧ್ಯೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿ. ಸಾಯಿ ಪ್ರಣೀತ್ ಹೋರಾಟ ಅಂತ್ಯಗೊಂಡಿದೆ. ಚೀನಾದ ಲೀ ಶೆ ಫೆಂಗ್ ವಿರುದ್ಧ 14-21, 17-21ರ ಅಂತರದಲ್ಲಿ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.