ADVERTISEMENT

ಸಿಂಧು, ಪ್ರಣಯ್‌ ಸವಾಲು ಅಂತ್ಯ

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 13:19 IST
Last Updated 1 ಜುಲೈ 2022, 13:19 IST
ಚೀನಾ ತೈಪೆಯ ತಾಯ್ ಜು ಯಿಂಗ್‌ – ಎಎಫ್‌ಪಿ ಚಿತ್ರ
ಚೀನಾ ತೈಪೆಯ ತಾಯ್ ಜು ಯಿಂಗ್‌ – ಎಎಫ್‌ಪಿ ಚಿತ್ರ   

ಕ್ವಾಲಾಲಂಪುರ (ಪಿಟಿಐ): ಪಿ.ವಿ.ಸಿಂಧು ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಮಲೇಷ್ಯಾ ಓಪನ್‌ ಸೂಪರ್‌–750 ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಹೊರಬಿದ್ದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಕೊನೆಗೊಂಡಿದೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಸಿಂಧು 13-21, 21-15, 21-13 ರಲ್ಲಿ ಚೀನಾ ತೈಪೆಯ ತಾಯ್ ಜು ಯಿಂಗ್‌ ಕೈಯಲ್ಲಿ ಪರಾಭವಗೊಂಡರು. ಏಳನೇ ಶ್ರೇಯಾಂಕ ಹೊಂದಿದ್ದ ಭಾರತದ ಆಟಗಾರ್ತಿ, ಎರಡನೇ ಶ್ರೇಯಾಂಕದ ಆಟಗಾರ್ತಿಯ ವಿರುದ್ಧ ಮೊದಲ ಗೇಮ್‌ ಗೆದ್ದು ಉತ್ತಮ ಆರಂಭ ಪಡೆದಿದ್ದರು.

ಆದರೆ ಮುಂದಿನ ಎರಡೂ ಗೇಮ್‌ಗಳಲ್ಲಿ ಅದೇ ಲಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿ, 53 ನಿಮಿಷಗಳಲ್ಲಿ ಸೋಲು ಅನುಭವಿಸಿದರು. ಸಿಂಧು ಅವರಿಗೆ ಚೀನಾ ತೈಪೆಯ ಆಟಗಾರ್ತಿಯ ಕೈಯಲ್ಲಿಎದುರಾದ ಸತತ ಆರನೇ ಸೋಲು ಇದು. ಇವರಿಬ್ಬರು ಪರಸ್ಪರ 21 ಸಲ ಪೈಪೋಟಿ ನಡೆಸಿದ್ದು, ತಾಯ್‌ ಜು 16–5 ರಲ್ಲಿ ಮೇಲುಗೈ ಹೊಂದಿದ್ದಾರೆ.

ADVERTISEMENT

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಪ್ರಣಯ್‌ 18–21, 16–21 ರಲ್ಲಿ ಇಂಡೊನೇಷ್ಯಾದ ಜೊನಾಥನ್‌ ಕ್ರಿಸ್ಟಿ ಎದುರು ಸೋತರು. ಕಳೆದ ಪಂದ್ಯದಲ್ಲಿ ವಿಶ್ವ ರ‍‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಚೌ ತಿಯೆನ್ ಚೆನ್‌ ಅವರನ್ನು ಮಣಿಸಿದ್ದ ಪ್ರಣಯ್, ಶಿಸ್ತಿನ ಆಟವಾಡುವಲ್ಲಿ ವಿಫಲರಾದರು.

ಏಳನೇ ಶ್ರೇಯಾಂಕ ಹೊಂದಿರುವ ಕ್ರಿಸ್ಟಿ ಎರಡೂ ಗೇಮ್‌ಗಳಲ್ಲಿ ಪೂರ್ಣ ಪ್ರಭುತ್ವ ಸಾಧಿಸಿದರು. ಸ್ಮ್ಯಾಷ್‌ಗಳು ಮತ್ತು ಡ್ರಾಪ್‌ ಶಾಟ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ, 44 ನಿಮಿಷಗಳಲ್ಲಿ ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.