ಸಿಂಗಪುರ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧೂ ಮತ್ತು ಎಚ್.ಎಸ್.ಪ್ರಣಯ್ ಅವರು ಸಿಂಗಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಮಂಗಳವಾರ ವಿಭಿನ್ನ ರೀತಿಯ ಗೆಲುವಿನೊಡನೆ ಎರಡನೇ ಸುತ್ತು ಪ್ರವೇಶಿಸಿದರು.
ಸಿಂಧು 21–14, 21–9 ರಿಂದ ಕೆನಡಾದ ವೆನ್ ಯು ಝಾಂಗ್ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಲು ತೆಗೆದುಕೊಂಡಿದ್ದು 31 ನಿಮಿಷಗಳನ್ನಷ್ಟೇ. ಅದರೆ ಅವರು ಮುಂದಿನ ಸುತ್ತಿನಲ್ಲಿ ಬಲಿಷ್ಠ ಎದುರಾಳಿ, ಟೋಕಿಯೊ ಒಲಿಂಪಿಕ್ ಸ್ವರ್ಣ ವಿಜೇತೆ ಹಾಗೂ ಐದನೇ ಕ್ರಮಾಂಕದ ಆಟಗಾರ್ತಿ ಚೆನ್ ಯು ಫಿ ಅವರನ್ನು ಎದುರಿಸಬೇಕಾಗಿದೆ.
ಆದರೆ ಪುರುಷರ ಸಿಂಗಲ್ಸ್‌ನಲ್ಲಿ, ವಿಶ್ವ ಕ್ರಮಾಂಕದಲ್ಲಿ 34ನೇ ಸ್ಥಾನದಲ್ಲಿರುವ ಪ್ರಣಯ್ ಅವರು ಎರಡನೇ ಸುತ್ತಿಗೇರಲು ಹೆಚ್ಚಿನ ಶ್ರಮ ಹಾಕಬೇಕಾಯಿತು. 32 ವರ್ಷ ವಯಸ್ಸಿನ ಈ ಆಟಗಾರ 19–21, 21–16, 21–14 ರಿಂದ ತಮಗಿಂತ ಹೆಚ್ಚಿನ ಕ್ರಮಾಂಕದ ಡೆನ್ಮಾರ್ಕ್ ಆಟಗಾರ ರಾಸ್ಮಸ್ ಗೆಮ್ಕೆ ಅವರನ್ನು ಹಿಮ್ಮೆಟ್ಟಿಸಿದರು.
ಪ್ರಣಯ್ 16ರ ಸುತ್ತಿನಲ್ಲಿ ಫ್ರಾನ್ಸ್‌ನ ಕ್ರಿಸ್ಟೋವ್ ಪೊಪೊವ್ ಅವರನ್ನು ಎದುರಿಸಲಿದ್ದಾರೆ.
ಆದರೆ ಭಾರತದ ಇತರ ಸ್ಪರ್ಧಿಗಳಿಗೆ ಮೊದಲ ಸುತ್ತಿನಲ್ಲಿ ನಿರಾಶೆ ಕಾದಿತ್ತು. ಮಾಳವಿಕಾ ಬನ್ಸೋಡ್, ಅನ್ಮೋಲ್ ಖಾರ್ಬ್, ಪ್ರಿಯಾಂಶು ರಾಜಾವತ್ ಮತ್ತು ಕಿರಣ್ ಜಾರ್ಜ್ ಸಿಂಗಲ್ಸ್‌ನಲ್ಲಿ ಹೊರಬಿದ್ದರು. ಮಾಳವಿಕಾ ಮತ್ತು ಪ್ರಿಯಾಂಶು ಮೊದಲ ಗೇಮ್ ಗೆದ್ದರೂ ನಂತರ ಹಿನ್ನಡೆ ಕಂಡರು.
ಮಾಳವಿಕಾ 21–14, 18–21, 11–21ರಲ್ಲಿ ಎಂಟನೇ ಶ್ರೇಯಾಂಕದ ಸುಪನಿದಾ ಕಟೆಥಾಂಗ್ (ಥಾಯ್ಲೆಂಡ್) ಅವರಿಗೆ ಸೋತರು. ಪುರುಷರ ಸಿಂಗಲ್ಸ್‌ನಲ್ಲಿ ಪ್ರಿಯಾಂಶು ಸುಮಾರು ಒಂದು ಗಂಟೆ ನಡೆದ ಪಂದ್ಯದಲ್ಲಿ 21–14, 10–21, 14–21ರಲ್ಲಿ ಏಳನೇ ಶ್ರೇಯಾಂಕದ ಜಪಾನ್ ಆಟಗಾರ ಕೊಡೈ ನರವೋಕಾ ಅವರಿಗೆ ಮಣಿದರು.
ಅನ್ಮೋಲ್ ಖಾರ್ಬ್ 11–21, 22–24 ರಲ್ಲಿ ನೇರ ಗೇಮ್‌ಗಳಿಂದ ಚೀನಾದ ಚೆನ್ ಯುಫಿ ಅವರೆದುರು ಹಿಮ್ಮೆಟ್ಟಿದರು.
ಈ ವರ್ಷ ಇಂಡಿಯಾ ಓಪನ್ ಕ್ವಾರ್ಟರ್‌ಫೈನಲ್ ತಲುಪಿದ್ದ ಜಾರ್ಜ್ 19–21, 17–21 ರಲ್ಲಿ ಚೀನಾದ ವೆಂಗ್ ಹಾಂಗ್ ಎದುರು ಸೋಲನುಭವಿಸಿದರು. ದಕ್ಷಿಣ ಕೊರಿಯಾದ ಕಿಮ್ ಗಾ ಯುನ್ 21–14, 21–8 ರಿಂದ ಸಂತೋಷ್ ರಾಮರಾಜ್ ಅವರನ್ನು ಸೋಲಿಸಲು ಪ್ರಯಾಸಪಡಲಿಲ್ಲ.
ಮಿಶ್ರ ಡಬಲ್ಸ್‌ನಲ್ಲೂ ಭಾರತದ ಸ್ಪರ್ಧಿಗಳು ಯಶಸ್ಸು ಕಾಣಲಿಲ್ಲ. ಚೀನಾದ ಚೆಂಗ್ ಷಿಂಗ್– ಝಾಂಗ್ ಚಿ ಜೋಡಿ 21–18, 21–13 ರಿಂದ ಧ್ರುವ್ ಕಪಿಲ ಮತ್ತು ತನಿಶಾ ಕ್ರಾಸ್ಟೊ ಅವರನ್ನು ಸೋಲಿಸಿದರು.
ಅಶಿತ್ ಸೂರ್ಯ– ಅಮೃತಾ ಪ್ರಮುತೇಶ್ ಜೋಡಿ 11–21, 17–21 ರಿಂದ ಜಪಾನ್‌ನ ಯುಯಿಚಿ ಶಿಮೊಗಾಮಿ– ಸಯಾಕ ಹೊಬರಾ ಜೋಡಿಗೆ ಮಣಿದರು.
ಮಹಿಳೆಯರ ಡಬಲ್ಸ್‌ನಲ್ಲಿ ಕವಿಪ್ರಿಯಾ ಸೆಲ್ವೈ– ಸಿಮ್ರಾನ್ ಸಿಂಗ್ ಜೋಡಿ, ದಕ್ಷಿಣ ಕೊರಿಯಾದ ಬೇಕ್ ಹಾ ನ– ಲೀ ಸೊ ಹೀ ಜೋಡಿಗೆ ಸಾಟಿಯಾಗಲಿಲ್ಲ. ಕೊರಿಯಾದ ಆಟಗಾರ್ತಿಯರು 21–4, 21–9 ರಿಂದ ನಿರಾಯಾಸವಾಗಿ ಜಯಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.