ADVERTISEMENT

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಸಿಂಧು, ಪ್ರಣಯ್‌ಗೆ ಮತ್ತೆ ಸತ್ವಪರೀಕ್ಷೆ

ಪಿಟಿಐ
Published 19 ಮೇ 2025, 13:38 IST
Last Updated 19 ಮೇ 2025, 13:38 IST
<div class="paragraphs"><p>&nbsp; ಪಿ.ವಿ. ಸಿಂಧು 	-ಪಿಟಿಐ ಸಂಗ್ರಹ ಚಿತ್ರ</p></div>

  ಪಿ.ವಿ. ಸಿಂಧು -ಪಿಟಿಐ ಸಂಗ್ರಹ ಚಿತ್ರ

   

ಕ್ವಾಲಾಲಂಪುರ: ಭಾರತದ ಪ್ರಮುಖ ಬ್ಯಾಡ್ಮಿಂಟನ್ ತಾರೆಯರಾದ ಪಿ.ವಿ.ಸಿಂಧು ಮತ್ತು ಎಚ್‌.ಎಸ್‌.ಪ್ರಣಯ್ ಕೆಲ ಸಮಯದಿಂದ ಫಿಟ್ನೆಸ್ ಮತ್ತು ಆಟದಲ್ಲಿ ಲಯದ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ತಿಂಗಳು ಸುಧೀರ್‌ಮನ್ ಕಪ್ ಟೂರ್ನಿಯಲ್ಲಿ ಕೊನೆಯ ಬಾರಿ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಆಡಿದಾಗ ಇವರಿಬ್ಬರು ಕ್ರಮವಾಗಿ ಇಂಡೊನೇಷ್ಯಾ ಮತ್ತು ಡೆನ್ಮಾರ್ಕ್‌ನ ಎದುರಾಳಿಗಳಿಗೆ ಸೋತಿದ್ದರು.

ಮಂಗಳವಾರ ಆರಂಭವಾಗುವ ಮಲೇಷ್ಯಾ ಮಾಸ್ಟರ್ಸ್‌ ಸೂಪರ್ 500 ಟೂರ್ನಿಯಲ್ಲಿ ಇವರಿಬ್ಬರು ಸುಧಾರಿತ ಆಟವಾಡಲು ಕಾತರರಾಗಿದ್ದಾರೆ. ಈ ಟೂರ್ನಿಯು ಸುಮಾರು ₹4 ಕೋಟಿ ಬಹುಮಾನ ಮೊತ್ತ ಹೊಂದಿದೆ.

ADVERTISEMENT

ಎರಡು ವಾರದ ವಿರಾಮದ ನಂತರ ಕಣಕ್ಕಿಳಿದು ತಮ್ಮ ಸಹಜ ಆಟ ಕಂಡುಕೊಳ್ಳುವ ಸವಾಲು ಅನುಭವಿಗಳಾದ ಸಿಂಧು ಮತ್ತು ಪ್ರಣಯ್ ಮುಂದಿದೆ. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಸದ್ಯ ವಿಶ್ವ ಕ್ರಮಾಂಕದಲ್ಲಿ 16ನೇ ಸ್ಥಾನದಲ್ಲಿದ್ದು, ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಜಪಾನ್‌ನ ನಟ್ಸುಕಿ ನಿದೈರಾ ಅವರನ್ನು ಎದುರಿಸಲಿದ್ದಾರೆ. ಜಪಾನ್‌ನ ಆಟಗಾರ್ತಿ ವಿಶ್ವ ಕ್ರಮಾಂಕದಲ್ಲಿ 29ನೇ ಸ್ಥಾನದಲ್ಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 35ನೇ ಸ್ಥಾನದಲ್ಲಿರುವ ಪ್ರಣಯ್ ಅವರಿಗೆ ಮೊದಲ ಸುತ್ತಿನಲ್ಲಿ ಪ್ರಬಲ ಸವಾಲು ಕಾದಿದೆ. ಅವರು ಐದನೇ ಶ್ರೇಯಾಂಕ ಪಡೆದಿರುವ ಜಪಾನ್‌ನ ಕೆಂಟೊ ನಿಶಿಮೊಟೊ ಅವರನ್ನು ಎದುರಿಸಬೇಕಾಗಿದೆ.

ಮಾಳವಿಕಾ ಬನ್ಸೋಡ್‌, ಉನ್ನತಿ ಹೂಡಾ, ಆಕರ್ಷಿ ಕಶ್ಯಪ್ ಅವರೂ ಕಣದಲ್ಲಿದ್ದಾರೆ. ಆಕರ್ಷಿ ಮೊದಲ ಸುತ್ತಿನಲ್ಲಿ ಎಂಟನೇ ಶ್ರೇಯಾಂಕದ ಇಂಡೊನೇಷ್ಯಾ ಆಟಗಾರ್ತಿ ಪುತ್ರಿ ಕಸುಮ ವಾರ್ದನಿ ಅವರನ್ನು ಎದುರಿಸಲಿದ್ದಾರೆ.

2024ರ ಗುವಾಹಟಿ ಮಾಸ್ಟರ್ಸ್ ವಿಜೇತ ಸತೀಶ್ ಕರುಣಾಕರನ್ ಅವರಿಗೆ ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಆ್ಯಂಡರ್ಸ್‌ ಅಂಟೋನ್ಸೆನ್ (ಡೆನ್ಮಾರ್ಕ್‌) ಸವಾಲು ಎದುರಾಗಿದೆ. 

ಪುರುಷರ ವಿಭಾಗದಲ್ಲಿ ಆಯುಷ್‌ ಶೆಟ್ಟಿ, ಪ್ರಿಯಾಂಶು ರಾಜಾವಾತ್ ಅವರೂ ಕಣದಲ್ಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ 19ನೇ ಕ್ರಮಾಂಕದ ಧ್ರುವ್ ಕಪಿಲಾ ಮತ್ತು ತನಿಶಾ ಕ್ರಾಸ್ಟೊ ಜೋಡಿಯು ಅರ್ಹತಾ ವಿಭಾಗ ದಾಟಿಬರುವ ಜೋಡಿಯನ್ನು ಎದುರಿಸಲಿದೆ.

ಪುರುಷರ ಸಿಂಗಲ್ಸ್‌ ಕ್ವಾಲಿಫೈರ್ಸ್‌ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್‌, ಎಸ್‌.ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಮತ್ತು ತರುಣ್ ಮುನ್ನೇಪಲ್ಲಿ ಅವರು ಕಣದಲ್ಲಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನಿಂದ ಪ್ರಧಾನ ಸುತ್ತಿಗೇರಲು ಅನ್ಮೋಲ್ ಖಾರ್ಬ್ ಮತ್ತು ತಸ್ನಿಮ್ ಮಿರ್ ಅವರು ಯತ್ನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.