ADVERTISEMENT

ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್‌ ಟೂರ್ನಿ: ಲಯಕ್ಕೆ ಮರಳುವರೆ ಸಿಂಧು

ಪಿಟಿಐ
Published 4 ಜುಲೈ 2022, 13:22 IST
Last Updated 4 ಜುಲೈ 2022, 13:22 IST
ಎಚ್‌.ಎಸ್‌. ಪ್ರಣಯ್‌– ಎಎಫ್‌ಪಿ ಚಿತ್ರ
ಎಚ್‌.ಎಸ್‌. ಪ್ರಣಯ್‌– ಎಎಫ್‌ಪಿ ಚಿತ್ರ   

ಕ್ವಾಲಾಲಂಪುರ:ಭಾರತದ ಪಿ.ವಿ.ಸಿಂಧುಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ಮಲೇಷ್ಯಾ ಮಾಸ್ಟರ್ಸ್ ಸೂಪರ್‌ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದು, ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಭಾನುವಾರ ಕೊನೆಗೊಂಡ ಮಲೇಷ್ಯಾ ಓಪನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಇವರಿಬ್ಬರು ಸೋಲು ಕಂಡಿದ್ದರು. ಹೀಗಾಗಿ ತಪ್ಪುಗಳನ್ನು ತಿದ್ದಿಕೊಂಡು ಮುನ್ನುಗ್ಗುವ ಛಲದಲ್ಲಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆಸಿಂಧು, ವಿಶ್ವ ಟೂರ್ ಟೂರ್ನಿಗಳಲ್ಲಿ ಸತತವಾಗಿ ಕ್ವಾರ್ಟರ್‌ಫೈನಲ್ ಅಥವಾ ಸೆಮಿಫೈನಲ್ ತಲುಪಿದ್ದಾರೆ. ಆದರೆ ಪ್ರಮುಖ ಆಟಗಾರ್ತಿಯರ ಎದುರು ಅವರ ಸೋಲಿನ ‘ಪರ್ವ‘ ಮುಂದುವರಿದಿದೆ. ಥಾಯ್ಲೆಂಡ್‌ನ ರಚನೊಕ್ ಇಂತನನ್‌, ಚೀನಾದ ಚೆನ್‌ ಯು ಫೆ ಮತ್ತು ಹೆ ಬಿಂಗ್ ಜಿಯಾವೊ, ಕೊರಿಯಾದ ಆ್ಯನ್‌ ಸೆ ಯಂಗ್ ಮತ್ತು ಚೀನಾ ತೈಪೆಯ ತೈ ಜು ಯಿಂಗ್ ಎದುರು ನಿರಾಸೆ ಅನುಭವಿಸಿದ್ದರು.

ADVERTISEMENT

ಈ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಅವರಿಗೆ ಮತ್ತೆ ಬಿಂಗ್ ಜಿಯಾವೊ ಸವಾಲು ಎದುರಾಗಿದೆ.

ಲಂಡನ್‌ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲಿ ಕೊರಿಯಾದ ಕಿಮ್ ಗಾ ಯುನ್ ವಿರುದ್ಧ ಆಡುವರು.

ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಪ್ರಣಯ್ ಅವರು ಇಂಡೊನೇಷ್ಯಾದ ಶೇಸರ್ ಹಿರೇನ್ ರುಸ್ತಾವಿಟೊ ಅವರನ್ನು ಎದುರಿಸಲಿದ್ದಾರೆ. ಇಲ್ಲಿ ಗೆದ್ದರೆ ಇಂಡೊನೇಷ್ಯಾದ ಮತ್ತೊಬ್ಬ ಆಟಗಾರ ಜೊನಾಥನ್‌ ಕ್ರಿಸ್ಟಿ ಮುಖಾಮುಖಿಯಾಗಬಹುದು.

ಈ ವಿಭಾಗದಲ್ಲಿ ಬಿ. ಸಾಯಿ ಪ್ರಣೀತ್‌, ಸಮೀರ್ ವರ್ಮಾ ಕೂಡ ಅದೃಷ್ಟಪರೀಕ್ಷೆಗೆ ಸಜ್ಜಾಗಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ತ್ರೀಶಾ ಜೋಲಿ– ಗಾಯತ್ರಿ ಗೋಪಿಚಂದ್‌, ಅಶ್ವಿನಿ ಪೊನ್ನಪ್ಪ– ಎನ್.ಸಿಕ್ಕಿ ರೆಡ್ಡಿ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.