ADVERTISEMENT

ಇಂಡೊನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು, ಸೇನ್ ಶುಭಾರಂಭ

ಪಿಟಿಐ
Published 8 ಜೂನ್ 2022, 19:30 IST
Last Updated 8 ಜೂನ್ 2022, 19:30 IST
ಪಿ.ವಿ.ಸಿಂಧು– ಎಎಫ್‌ಪಿ ಚಿತ್ರ
ಪಿ.ವಿ.ಸಿಂಧು– ಎಎಫ್‌ಪಿ ಚಿತ್ರ   

ಜಕಾರ್ತ, ಇಂಡೊನೇಷ್ಯಾ: ಭಾರತದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಸಿಂಧು 18–21, 21–5, 21–11ರಿಂದ ಡೆನ್ಮಾರ್ಕ್‌ನ ಲಿನೆ ಕ್ರಿಸ್ಟೊಫರ್ಸನ್ ಸವಾಲು ಮೀರಿದರು. 51 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೊದಲ ಗೇಮ್‌ ಸೋತ ಭಾರತದ ಆಟಗಾರ್ತಿ ನಂತರ ಪ್ರಾಬಲ್ಯ ಮೆರೆದರು.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ಮುಂದಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ADVERTISEMENT

ಲಕ್ಷ್ಯ ಸೇನ್ ಅವರು ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ 21-10, 21-18ರಿಂದ ಡೆನ್ಮಾರ್ಕ್‌ನ ಹ್ಯಾನ್ಸ್ ಕ್ರಿಸ್ಟಿಯನ್‌ ಸೋಲ್ಬರ್ಗ್‌ ವಿಟಿಂಗಸ್‌ ಅವರನ್ನು ಮಣಿಸಿದರು.

ಆಕರ್ಷಿಗೆ ನಿರಾಸೆ: ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಆಕರ್ಷಿ ಕಶ್ಯಪ್‌12-21, 11-21ರಿಂದ ಅಮೆರಿಕದ ಬಿವೆನ್ ಜಾಂಗ್ ಎದುರು ಎಡವಿದರೆ, ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮಾ17-21, 15-21ರಿಂದ ಸ್ಥಳೀಯ ಆಟಗಾರ ಚಿಕೊ ಔರಾ ದ್ವಿ ವರ್ದೊಯೊ ಎದುರು ನಿರಾಸೆ ಅನುಭವಿಸಿದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಇಶಾನ್‌ ಭಟ್ನಾಗರ್– ತನಿಶಾ ಕ್ರಾಸ್ತೊ ಜೋಡಿ ಜಿದ್ದಾಜಿದ್ದಿನ ಹೋರಾಟದಲ್ಲಿ14-21, 21-16, 12-21ರಿಂದ ಇಂಡೊನೇಷ್ಯಾದ ಪ್ರವೀಣ್ ಜೋರ್ಡಾನ್‌ ಮತ್ತು ಮೆಲಾಟಿ ದಿವಾ ಒಕ್ಟಾವಿಯಾಂಟಿ ಎದುರು ಕೈಚೆಲ್ಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.