ADVERTISEMENT

ಹಾಲಿ ಚಾಂಪಿಯನ್ ಭಾರತಕ್ಕೆ ಕಠಿಣ ಸವಾಲು

ಜೂನಿಯರ್ ಹಾಕಿ ವಿಶ್ವಕಪ್ ಸೆಮಿಫೈನಲ್ ಇಂದು: ಆತಿಥೇಯರಿಗೆ ಜರ್ಮನಿ ಎದುರಾಳಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 16:33 IST
Last Updated 2 ಡಿಸೆಂಬರ್ 2021, 16:33 IST
ಭಾರತ ಹಾಕಿ ತಂಡದ ತಾಲೀಮು –ಪಿಟಿಐ ಚಿತ್ರ
ಭಾರತ ಹಾಕಿ ತಂಡದ ತಾಲೀಮು –ಪಿಟಿಐ ಚಿತ್ರ   

ಭುವನೇಶ್ವರ್ (ಪಿಟಿಐ): ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ಹಾಲಿ ಚಾಂಪಿಯನ್ ಭಾರತ ತಂಡವು ಶುಕ್ರವಾರ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಾಢ್ಯ ಜರ್ಮನಿ ತಂಡವನ್ನು ಎದುರಿಸಲಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಪಂದ್ಯವು ನಡೆಯಲಿದೆ. ಆರು ಬಾರಿ ಪ್ರಶಸ್ತಿ ಜಯಿಸಿರುವ ಜರ್ಮನಿಯನ್ನು ಮಣಿಸುವ ಸವಾಲು ಆತಿಥೇಯರ ಮುಂದಿದೆ. ಟೂರ್ನಿಯ ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡವು 4–5ರಿಂದ ಫ್ರಾನ್ಸ್‌ ಎದುರು ಸೋತಿತ್ತು.

ಆದರೆ, ನಂತರದ ಪಂದ್ಯಗಳಲ್ಲಿ ಅಮೋಘ ಆಟವಾಡಿ ನಾಕೌಟ್ ಹಂತ ತಲುಪಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ 1–0ಯಿಂದ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿತ್ತು. ಯಶದೀಪ್ ಸಿವಾಚ್, ಉಪನಾಯಕ ಸಂಜಯ್ ಕುಮಾರ್ ಮತ್ತು ಶ್ರದ್ಧಾನಂದ ತಿವಾರಿ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ.

ADVERTISEMENT

ಗೋಲ್‌ಕೀಪರ್‌ಗಳಾದ ಪ್ರಶಾಂತ್ ಚೌಹಾಣ್ ಮತ್ತು ಪವನ್ ಕೂಡ ಅಮೋಘವಾಗಿ ಆಡಿದ್ದಾರೆ. ಬೆಲ್ಜಿಯಂ ಎದುರಿನ ಪಂದ್ಯದಲ್ಲಿ ಭಾರತದ ಗೋಲ್‌ಕೀಪರ್‌ಗಳ ಆಟವು ರೋಮಾಂಚಕಾರಿಯಾಗಿತ್ತು.

ಪೆನಾಲ್ಟಿ ಕಾರ್ನರ್‌ಗಳಲ್ಲಿ ಸಂಜಯ್, ತಿವಾರಿ, ಅರೈಜಿತ್ ಸಿಂಗ್ ಹುಂಡಾಲ ಮತ್ತು ಅಭಿಷೇಕ್ ಲಾಕ್ರಾ ಕೂಡ ಎದುರಾಳಿಗಳಿಗೆ ಕಠಿಣ ಸವಾಲೊಡ್ಡುವಲ್ಲಿ ಇದುವರೆಗೆ ಸಫಲರಾಗಿದ್ದಾರೆ. ಫ್ರಾನ್ಸ್ ಮತ್ತು ಪೊಲೆಂಡ್ ಎದುರಿನ ಪಂದ್ಯಗಳಲ್ಲಿ ಸಂಜಯ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ನಾಯಕ ವಿವೇಕ್ ಸಾಗರ್ ಪ್ರಸಾದ್ ಅವರು ಭಾರತ ಸೀನಿಯರ್ ತಂಡದಲ್ಲಿ ಆಡಿರುವ ಅನುಭವಿ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಅನುಭವವನ್ನು ಇಲ್ಲಿ ವಿನಿಯೋಗಿಸುತ್ತಿರುವ ಅವರಿಗೆಉತ್ತಮ ಫಲ ದೊರೆಯುತ್ತಿದೆ.

ಆದರೆ, ಜರ್ಮನಿ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. 2013ರಲ್ಲಿ ಪ್ರಶಸ್ತಿ ಜಯಿಸಿತ್ತು. ಅದರ ನಂತರ ಫೈನಲ್ ಪ್ರವೇಶಿಸಿಲ್ಲ. 2016ರಲ್ಲಿ ಮೂರನೇ ಸ್ಥಾನ ಪಡೆದಿತ್ತು.

‘ಜರ್ಮನಿಯನ್ನು ಕಡೆಗಣಿಸುವಂತಿಲ್ಲ. ಬಹಳ ಒಳ್ಳೆಯ ಆಟಗಾರರು ಇದ್ದಾರೆ. ಅವರ ವೇಗ ಮತ್ತು ಕೌಶಲಪೂರ್ಣ ಆಟಕ್ಕೆ ತಕ್ಕ ಪ್ರತಿತಂತ್ರ ಹೆಣೆಯಬೇಕು’ ಎಂದು ಭಾರತ ತಂಡದ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.

ಟೂರ್ನಿಯ ಇನ್ನೊಂದು ಸೆಮಿಫೈನಲ್‌ನಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟಿನಾ ತಂಡಗಳು ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.