ADVERTISEMENT

ಪ್ರೀ ಕ್ವಾರ್ಟರ್‌ಗೆ ಸೌರಭ್, ರಿತುಪರ್ಣಾ

ರಷ್ಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಅಜಯ್‌ ಜಯರಾಮ್‌ಗೆ ನಿರಾಸೆ

ಪಿಟಿಐ
Published 25 ಜುಲೈ 2018, 19:30 IST
Last Updated 25 ಜುಲೈ 2018, 19:30 IST
ಸೌರಭ್‌ ವರ್ಮಾ
ಸೌರಭ್‌ ವರ್ಮಾ   

ವ್ಲಾದಿವೊಸ್ಟೊಕ್‌, ರಷ್ಯಾ: ಭಾರತದ ಸೌರಭ್‌ ವರ್ಮಾ ಹಾಗೂ ರಿತುಪರ್ಣಾ ದಾಸ್‌ ಅವರು ಇಲ್ಲಿ ನಡೆ ಯುತ್ತಿರುವ ರಷ್ಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಹಂತಕ್ಕೆ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಸೌರಭ್‌ ವರ್ಮಾ ಅವರು 23–21, 21–11ರಿಂದ ಭಾರತದವರೇ ಆದ ರಾಹುಲ್‌ ಯಾದವ್‌ ಚಿತ್ತಬೊಯ್ನಾ ಅವರನ್ನು ಮಣಿಸಿದರು. ಎಂಟನೇ ಶ್ರೇಯಾಂಕಿತ ಸೌರಭ್‌ ಅವರ ಸವಾಲು ಮೀರಲು ರಾಹುಲ್‌ ವಿಫಲವಾದರು.

ಇನ್ನೊಂದು ಪಂದ್ಯದಲ್ಲಿ ಶುಭಂಕರ್‌ ಡೇ ಅವರು ಭಾರತದವರೇ ಆದ ಅಜಯ್‌ ಜಯರಾಮ್‌ ಅವರನ್ನು ಮಣಿಸಿದರು. ಐದನೇ ಶ್ರೇಯಾಂಕಿತ ಆಟಗಾರ 15–21, 21–14, 21–15ರಿಂದ ಅಜಯ್‌ ವಿರುದ್ಧ ಗೆದ್ದರು. ಈ ಮೂಲಕ ಅವರು ಹದಿನಾರರ ಘಟ್ಟ ತಲುಪಿದರು.

ADVERTISEMENT

ಸಿದ್ಧಾರ್ಥ್‌ ಪ್ರತಾಪ್‌ ಸಿಂಗ್‌ ಅವರು ಭಾರತದವರೇ ಆದ ಬೊಧಿತ್‌ ಜೋಷಿ ಅವರನ್ನು 21–8, 21–14ರಿಂದ ಪರಾಭವಗೊಳಿಸಿದರು. ಪ್ರೀ ಕ್ವಾರ್ಟರ್‌ ಹಂತದಲ್ಲಿ ಅವರು ಶುಭಂಕರ್‌ ವಿರುದ್ಧ ಸೆಣಸಲಿದ್ದಾರೆ.

ಪರುಪಳ್ಳಿ ಕಶ್ಯಪ್‌ ಅವರು 12–21, 11–21ರಿಂದ ಜಪಾನ್‌ನ ರ‍್ಯೊಟಾರೊ ಮರುವಿ ವಿರುದ್ಧ ಸೋತರು. ರಷ್ಯಾದ ವ್ಲಾದಿಮಿರ್‌ ಮಲ್ಕೊವ್‌ ಅವರು21–14, 21–8ರಿಂದ ಗುರು ಸಾಯಿದತ್ತ ವಿರುದ್ಧ ಜಯಿಸಿದರು. ಪ್ರತ್ಯುಲ್ ಜೋಶಿ, 12–21, 21–18, 13–21ರಿಂದ ಇಸ್ರೇಲ್‌ನ ಮೂರನೇ ಶ್ರೇಯಾಂಕಿತ ಮಿಶಾ ಜಿಲ್ಬರ್‌ಮನ್‌ ಎದುರು ಮಣಿದರು.

ಚಿರಾಗ್‌ ಸೇನ್‌ 14–21, 21–16, 16–21ರಿಂದ ಸ್ಪೇನ್‌ನ ಅಗ್ರ ಶ್ರೇಯಾಂಕಿತ ಪಾಬ್ಲೊ ಏಬಿಯನ್‌ ವಿರುದ್ಧ ಸೋತರು. ಪಂದ್ಯದುದ್ದಕ್ಕೂ ತೀವ್ರ ಪೈಪೋಟಿ ನೀಡಿದ ಭಾರತದ ಆಟಗಾರ ಕೊನೆಯಲ್ಲಿ ಪಾಬ್ಲೊ ಅವರನ್ನು ಕಟ್ಟಿಹಾಕಲು ವಿಫಲರಾದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ರಿತುಪರ್ಣಾ ಅವರು 21–11, 21–18ರಿಂದ ಸ್ಥಳೀಯ ಆಟಗಾರ್ತಿ ವಿಕ್ಟೊರಿಯಾ ಸ್ಲೊಬೊದ್ಯಾನ್ಯುಕ್‌ ಅವರ ಸವಾಲು ಮೀರಿದರು.

ಮತ್ತೊಂದು ಪಂದ್ಯದಲ್ಲಿ ಏಳನೇ ಶ್ರೇಯಾಂಕಿತ ಮುಗ್ಧಾ ಅಗ್ರೆ, 21–16, 21–19ರಿಂದ ಮಲೇಷ್ಯಾದ ಯಿನ್‌ ಫುನ್‌ ಲಿನ್‌ ವಿರುದ್ಧ ಗೆದ್ದರು.

ವೃಶಾಲಿ ಗುಮ್ಮಡಿ ಅವರು 21–11, 21–16ರಿಂದ ರಷ್ಯಾದ ಎಲೆನಾ ಕೊಮೆಂಡ್ರೊವಸ್ಕಜಾ ವಿರುದ್ಧ ಜಯಿಸಿದರು.

ಸಾಯಿ ಉತ್ತೇಜಿತಾ ರಾವ್‌ ಚಕ್ಕಾ ಅವರು 21–14, 15–21, 18–21ರಿಂದ ದಕ್ಷಿಣ ಕೊರಿಯಾದ ಬ್ಯೊಲ್‌ ಲಿಮ್‌ ಲೀ ವಿರುದ್ಧ ಪರಾಭವಗೊಂಡರು. ಎಸ್ಟೊನಿಯಾದ ಎಂಟನೇ ಶ್ರೇಯಾಂಕಿತ ಆಟಗಾರ್ತಿ ಕ್ರಿಸ್ಟಿನ್‌ ಕೂಬಾ 21–13, 21–15ರಿಂದ ವೈದೇಹಿ ಚೌಧರಿ ಅವರನ್ಹು ಸೋಲಿಸಿದರು.

ಅರುಣ್‌ ಜಾರ್ಜ್‌ ಹಾಗೂ ಸನ್ಯಾಮ್‌ ಶುಕ್ಲಾ ಜೋಡಿಯು 21–15, 21–15ರಿಂದ ಸ್ಥಳೀಯ ವ್ಲಾದಿಮಿರ್‌ ನಿಕೊಲೊವ್‌ ಹಾಗೂ ಅರ್ಟೆಮ್‌ ಸೆರ್ಪುಯೊನೊವ್‌ ಜೋಡಿಯನ್ನು ಕಟ್ಟಿಹಾಕಿತು. ಇದರೊಂದಿಗೆ ಮೂರನೇ ಸುತ್ತು ತಲುಪಿತು. ಭಾರತದ ಆಟಗಾರರು ಈ ಸುತ್ತಿನಲ್ಲಿ ಕೆನಡಾದ ಜೆಫ್ರಿ ಲಾಮ್‌ ಹಾಗೂ ಇಂಗ್ಲೆಂಡ್‌ನ ಹಿನ್‌ ಶುನ್‌ ಹಾಂಗ್‌ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.