ADVERTISEMENT

ಫೆಡರೇಷನ್‌ಗಳೊಂದಿಗೆ ಸಭೆ ನಡೆಸಿದ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 17:37 IST
Last Updated 16 ಏಪ್ರಿಲ್ 2020, 17:37 IST

ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯವು 11 ರಾಷ್ಟ್ರೀಯ ಫೆಡರೇಷನ್‌ಗಳೊಂದಿಗೆ (ಎನ್‌ಎಸ್‌ಎಫ್‌) ಗುರುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಹತ್ವದ ಸಭೆ ನಡೆಸಿತು.

2021ರ ಟೋಕಿಯೊ ಒಲಿಂಪಿಕ್ಸ್‌ಗೆ ಪೂರಕವಾಗಿ ಯಾವೆಲ್ಲಾ ಯೋಜನೆಗಳನ್ನು ಸಿದ್ಧಪಡಿಸಿದ್ದೀರಿ ಎಂಬ ಮಾಹಿತಿ ಪಡೆದುಕೊಂಡಿತು.

ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್‌ ಜುಲಾನಿಯಾ ಅವರು ಹೋದ ವಾರ, ಹಾಕಿ ಇಂಡಿಯಾ, ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ಮತ್ತು ಭಾರತ ಕುಸ್ತಿ ಫೆಡರೇಷನ್ ಸೇರಿದಂತೆ ಇತರೆ ಕೆಲ ಫೆಡರೇಷನ್‌ಗಳ ಜೊತೆ ಸಭೆ ನಡೆಸಿದ್ದರು.

ADVERTISEMENT

ಗುರುವಾರದ ಸಭೆಯಲ್ಲಿ ರಾಧೇಶ್ಯಾಮ್‌ ಅವರು ಹ್ಯಾಂಡ್‌ಬಾಲ್‌, ಟೆನಿಸ್‌, ಸ್ಕ್ವಾಷ್‌, ಬ್ಯಾಸ್ಕೆಟ್‌ಬಾಲ್‌, ವಿಶೇಷ ಒಲಿಂಪಿಕ್ಸ್‌ ಭಾರತ್‌, ವಾಲಿಬಾಲ್‌, ವುಶು, ಯಾಚಿಂಗ್‌, ಕಯಾಕಿಂಗ್‌ ಮತ್ತು ಕನೋಯಿಂಗ್‌, ಕಬಡ್ಡಿ ಹಾಗೂ ಅಖಿಲ ಭಾರತ ವಿಶ್ವವಿದ್ಯಾಲಯ (ಎಐಯು) ಫೆಡರೇಷನ್‌ಗಳ ಪ್ರತಿ ಇಬ್ಬರು ಪ್ರತಿನಿಧಿಗಳ ಜೊತೆ ಆದ್ಯತೆಯ ಮೇರೆಗೆ ಚರ್ಚಿಸಿದರು.

‘ಕೊರೊನಾ ಬಿಕ್ಕಟ್ಟು ಬಗೆಹರಿದ ಬಳಿಕ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸುವುದು ಹಾಗೂ ಟೋಕಿಯೊ ಒಲಿಂಪಿಕ್ಸ್‌ ಹಾಗೂ 2024 ಮತ್ತು 2028ರ ಒಲಿಂಪಿಕ್ಸ್‌ಗಳನ್ನು ಗಮದಲ್ಲಿಟ್ಟುಕೊಂಡು ಯಾವೆಲ್ಲ ಕಾರ್ಯಯೋಜನೆಗಳನ್ನು ರೂಪಿಸಿದ್ದೀರಿ ಎಂಬ ಬಗ್ಗೆ ಮಾಹಿತಿ ಪಡೆದರು. ಮುಂದಿನ ಏಷ್ಯನ್‌ ಕ್ರೀಡಾಕೂಟದಲ್ಲಿ ನಿಮ್ಮ ಕ್ರೀಡಾಪಟುಗಳಿಂದ ಏನು ನಿರೀಕ್ಷೆ ಇಟ್ಟುಕೊಂಡಿದ್ದೀರಿ ಎಂಬುದರ ಕುರಿತೂ ಕೇಳಿದರು. ಕೋಚ್‌ಗಳಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿ ಹಾಗೂ ಶ್ರೇಷ್ಠತಾ ಕೇಂದ್ರಗಳನ್ನು ಆರಂಭಿಸುವತ್ತಲೂ ಚಿತ್ತ ಹರಿಸುವಂತೆ ಸೂಚಿಸಿದರು’ ಎಂದು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ಫೆಡರೇಷನ್‌ವೊಂದರ ಅಧಿಕಾರಿ ಹೇಳಿದ್ದಾರೆ.

‘ಇದು ಔಪಚಾರಿಕ ಸಭೆ. ಹೋದ ವಾರ ಕೆಲ ಫೆಡರೇಷನ್‌ಗಳ ಜೊತೆ ಚರ್ಚಿಸಲಾಗಿತ್ತು. ಅದರಂತೆ ಈ ಬಾರಿ 11 ಫೆಡರೇಷನ್‌ಗಳ ಜೊತೆ ಮಾತಕತೆ ನಡೆಸಲಾಯಿತು. ಉಳಿದ ಫೆಡರೇಷನ್‌ಗಳ ಜೊತೆ ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಾಗುತ್ತದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.