ADVERTISEMENT

ರಾಷ್ಟ್ರೀಯ ಕ್ರೀಡಾಕೂಟ: ಜ್ಯೋತಿಗೆ ಚಿನ್ನ, ಕನ್ನಡತಿ ಉನ್ನತಿಗೆ ಬೆಳ್ಳಿ

ಅನಿಮೇಶ್ ಕುಜೂರ್‌ ಪ್ರಥಮ

ಪಿಟಿಐ
Published 11 ಫೆಬ್ರುವರಿ 2025, 16:19 IST
Last Updated 11 ಫೆಬ್ರುವರಿ 2025, 16:19 IST
ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಮಹಿಳೆಯರ 200 ಮೀ ಓಟದಲ್ಲಿ ಪದಕ ಗೆದ್ದವರು ; ಕರ್ನಾಟಕದ ಉನ್ನತಿ ಅಯ್ಯಪ್ಪ (ಬೆಳ್ಳಿ), ಆಂಧ್ರಪ್ರದೇಶದ ಜ್ಯೋತಿ ಯರಾಜಿ (ಚಿನ್ನ) ಮತ್ತು ತೆಲಂಗಾಣದ ನಿತ್ಯಾ ಗಂಧೆ (ಕಂಚು)  
ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಮಹಿಳೆಯರ 200 ಮೀ ಓಟದಲ್ಲಿ ಪದಕ ಗೆದ್ದವರು ; ಕರ್ನಾಟಕದ ಉನ್ನತಿ ಅಯ್ಯಪ್ಪ (ಬೆಳ್ಳಿ), ಆಂಧ್ರಪ್ರದೇಶದ ಜ್ಯೋತಿ ಯರಾಜಿ (ಚಿನ್ನ) ಮತ್ತು ತೆಲಂಗಾಣದ ನಿತ್ಯಾ ಗಂಧೆ (ಕಂಚು)      

ಡೆಹ್ರಾಡೂನ್: ಒಲಿಂಪಿಯನ್ ಜ್ಯೋತಿ ಯರಾಜಿ ಮತ್ತು ಕರ್ನಾಟಕದ ಉದಯೋನ್ಮುಖ ಅಥ್ಲೀಟ್ ಉನ್ನತಿ ಅಯ್ಯಪ್ಪ ಅವರು 38ನೇ ರಾಷ್ಟ್ರೀಯ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದರು. 

ಮಂಗಳವಾರ ಇಲ್ಲಿ ನಡೆದ ಸ್ಪರ್ಧೆಯಲ್ಲಿ ಆಂಧ್ರಪ್ರದೇಶದ 25 ವರ್ಷ ವಯಸ್ಸಿನ ಜ್ಯೋತಿ 23.35 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿದರು. ಉನ್ನತಿ ಅಯ್ಯಪ್ಪ (23.70ಸೆ) ಮತ್ತು ತೆಲಂಗಾಣದ ನಿತ್ಯಾ ಗಂಧೆ (23.76ಸೆ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. 

ಈ ಕೂಟದಲ್ಲಿ ಜ್ಯೋತಿ ಅವರಿಗೆ ಇದು ಎರಡನೇ ಚಿನ್ನದ ಪದಕ. ಈ ಸಾಧನೆ ಮಾಡಿದ 3ನೇ ಅಥ್ಲೀಟ್ ಕೂಡ ಅವರಾಗಿದ್ದಾರೆ. 2023ರಲ್ಲಿ ಗೋವಾದಲ್ಲಿ ನಡೆದಿದ್ದ ಕೂಟದಲ್ಲಿ ಜ್ಯೋತಿ ಕಂಚು ಜಯಿಸಿದ್ದರು. 

ADVERTISEMENT

 ಉನ್ನತಿ ಅವರು ಅನುಭವಿ ಅಥ್ಲೆಟಿಕ್ ಕೋಚ್ ಅಯ್ಯಪ್ಪ ಮತ್ತು ಒಲಿಂಪಿಯನ್ ಅಥ್ಲೀಟ್ ಪ್ರಮೀಳಾ ದಂಪತಿಯ ಮಗಳು. ಉನ್ನತಿಗೂ ತಂದೆ ಅಯ್ಯಪ್ಪ ಅವರೇ ತರಬೇತಿ ನೀಡುತ್ತಿದ್ದಾರೆ.

ಅನಿಮೇಶ್ ಹ್ಯಾಟ್ರಿಕ್:

ಡಿಶಾದ ಅನಿಮೇಶ್ ಕುಜೂರ್ ಅವರು ಕೂಟದಲ್ಲಿ 3ನೇ ಚಿನ್ನದ ಪದಕ ಜಯಿಸಿದರು. ಪುರುಷರ 200 ಮೀಟರ್ಸ್ ಓಟದಲ್ಲಿ 20.58 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲಿಗರಾದರು. ಆದರೆ ಅವರಿಗೆ ರಾಷ್ಟ್ರೀಯ ಕ್ರೀಡಾಕೂಟದ ದಾಖಲೆ (20.55ಸೆ) ಸ್ವಲ್ಪದರಲ್ಲಿ ಕೈತಪ್ಪಿತು. ಈ ದಾಖಲೆಯನ್ನು 2022ರ ಕೂಟದಲ್ಲಿ ಅಸ್ಸಾಂ ರಾಜ್ಯದ ಅಮ್ಲನ್ ಬೋರ್ಗೊಹೈನ್ ನಿರ್ಮಿಸಿದ್ದರು.

ಈ ಕೂಟದಲ್ಲಿ ಶನಿವಾರ ನಡೆದಿದ್ದ 100 ಮೀ ಓಟ ಮತ್ತು ಭಾನುವಾರ 4X100) ಮೀ ರಿಲೆ ಓಟಗಳಲ್ಲಿಯೂ ಅನಿಮೇಶ್ ಮೊದಲಿಗರಾಗಿದ್ದರು.

ತಮಿಳುನಾಡಿನ ರಾಘುಲ್ ಕುಮಾರ್ ಜಿ (21.06ಸೆ) ಮತ್ತು ನಿತಿನ್ ಬಿ (21.07ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. 

ಚಂದಾಗೆ ಬಂಗಾರ: ದೆಹಲಿ ಮಧ್ಯಮ ಅಂತರದ ಓಟಗಾರ್ತಿ ಕೆ.ಎಂ. ಚಂದಾ ಅವರು ಮಹಿಳೆಯರ 800 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಜಯಿಸಿದರು. 2ನಿಮಿಷ, 00.82 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು 2022ರಲ್ಲಿ ತಾವೇ ನಿರ್ಮಿಸಿದ್ದ ದಾಖಲೆ (2ನಿ,01.58ಸೆ) ಉತ್ತಮಪಡಿಸಿಕೊಂಡರು. ಚಂದಾ ಅವರು 1500 ಮೀಟರ್ಸ್ ವಿಭಾಗದಲ್ಲಿಯೂ ಚಿನ್ನದ ಪದಕ ಜಯಿಸಿದರು. 

ರೇಸ್ ವಾಕ್: ಒಂಬತ್ತೂ ಅಥ್ಲೀಟ್‌ಗಳ ದಾಖಲೆ

ಬೆಳಿಗ್ಗೆ  ನಡೆದ ಮಹಿಳೆಯರ ವಿಭಾಗದ 10 ಕಿ.ಮೀ ರೇಸ್‌ ವಾಕ್‌ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ 9 ಅಥ್ಲೀಟ್‌ಗಳು ದಾಖಲೆ ಬರೆದರು. 26 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ದಾಖಲೆಯನ್ನು ಅವರು ಉತ್ತಮಪಡಿಸಿಕೊಂಡರು.  ಒಟ್ಟು 11 ಅಥ್ಲೀಟ್‌ಗಳು ರೇಸ್‌ ವಾಕ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ ಅದರಲ್ಲಿ ಇಬ್ಬರು ಅಂತಿಮ ಗೆರೆ ಮುಟ್ಟುವಲ್ಲಿ ಸಫಲರಾಗಲಿಲ್ಲ.  ರಾಷ್ಟ್ರೀಯ ದಾಖಲೆ ಹೊಂದಿರುವ ಪ್ರಿಯಾಂಕಾ ಗೋಸ್ವಾಮಿ ಅವರು ಹೆಸರು ನೋಂದಾಯಿಸಿದ್ದರು. ಆದರೆ ಕಣಕ್ಕಿಳಿಯಲಿಲ್ಲ. 

ಸ್ಪರ್ಧೆಯಲ್ಲಿ ಹರಿಯಾಣದ ರವೀನಾ ಅವರು 45.52 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿದರು. ಇದರೊಂದಿಗೆ 1999ರಲ್ಲಿ ಇಂಫಾಲ್‌ದಲ್ಲಿ ನಡೆದಿದ್ದ ಕೂಟದಲ್ಲಿ ಮಣಿಪುರದ ವೈ. ಬಾಲಾದೇವಿ (51.56ಸೆ) ದಾಖಲೆಯನ್ನು ಅವರು ಮೀರಿದರು. 

ಇನ್ನೂ ಎಂಟು ಅಥ್ಲೀಟ್‌ಗಳೂ ರವೀನಾ ಅವರನ್ನು ಅನುಸರಿಸಿ ಹಳೆಯ ದಾಖಲೆಯನ್ನು ಮೀರಿದರು.  ಉತ್ತರಾಖಂಡದ ಶಾಲಿನಿ (46.12ಸೆ) ಉತ್ತರಪ್ರದೇಶದ ಮುನೀತಾ ಪ್ರಜಾಪತಿ (46.23ಸೆ) ತಮಿಳುನಾಡಿನ ಮೊಕಾವಿ ಮುತ್ತುರಥಿನಮ್ (46.23) ಉತ್ತರಾಖಂಡದ ಪಾಯಲ್ (47.36ಸೆ) ಉತ್ತರಾಖಂಡದ ರೇಷ್ಮಾ ಪಟೇಲ್ (48.16ಸೆ) ಉತ್ತರಾಖಂಡದ ಮಾನ್ಸಿ ನೇಗಿ (48.32ಸೆ) ಮಹಾರಾಷ್ಟ್ರದ ಸೇಜಲ್ ಸಿಂಗ್ (49.33ಸೆ) ಮತ್ತು ಹರಿಯಾಣದ ಮೋನಿಕಾ (51.45ಸೆ)  ಅವರೂ ದಾಖಲೆ ಬರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.