ADVERTISEMENT

ಒಲಿಂಪಿಕ್ಸ್‌ ಮೇಲೆ ಶ್ರಬಣಿ ನಂದಾ ಕಣ್ಣು

ಪಿಟಿಐ
Published 26 ಜುಲೈ 2020, 11:05 IST
Last Updated 26 ಜುಲೈ 2020, 11:05 IST
ಶ್ರಬಣಿ ನಂದಾ
ಶ್ರಬಣಿ ನಂದಾ   

ನವದೆಹಲಿ: ಭಾರತದ ವೇಗದ ಓಟಗಾರ್ತಿ ಶ್ರಬಣಿ ನಂದಾ ಅವರಿಗೆ ಎರಡನೇ ಬಾರಿ ಒಲಿಂಪಿಕ್‌ ಟಿಕೆಟ್‌ ಗಿಟ್ಟಿಸುವ ಹಂಬಲ. ಅದಕ್ಕಾಗಿ ಅವರು ಸತತ ಪ್ರಯತ್ನಗಳಲ್ಲಿ ನಿರತರಾಗಿದ್ದಾರೆ. ಸದ್ಯ ಜಮೈಕಾದಲ್ಲಿರುವ ಅವರು ಅಗತ್ಯ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ.

29 ವರ್ಷದ ನಂದಾ, ಜಮೈಕಾದ ಕಿಂಗ್‌ಸ್ಟನ್‌ನಲ್ಲಿಬುಧವಾರ ನಡೆದ ವೆಲಾಸಿಟಿ ಉತ್ಸವದಲ್ಲಿ ಭಾಗವಹಿಸಿದ್ದರು. ಆ ಮೂಲಕ ಕೊರೊನಾ ಕಾಲದಲ್ಲಿಟ್ರ್ಯಾಕ್‌ ಮತ್ತು ಫೀಲ್ಡ್‌ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡ ಭಾರತದ ಮೊದಲ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಈ ವರ್ಷದ ಆರಂಭದಿಂದ ಅವರು ಜಮೈಕಾದಲ್ಲೇನೆಲೆಸಿದ್ದಾರೆ. ಈ ಮೊದಲು ಅವರು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.

ADVERTISEMENT

ಒಡಿಶಾ ಸರ್ಕಾರದ ಜಲವಿದ್ಯುತ್‌ ನಿಗಮದಲ್ಲಿ ಉದ್ಯೋಗಿಯಾಗಿರುವ ನಂದಾ ಅವರಿಗೆ ಸಂಪೂರ್ಣ ವೇತನದೊಂದಿಗೆ ಜಮೈಕಾದಲ್ಲಿ ತರಬೇತಿ ಪಡೆಯಲು ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಅದು ತನ್ನ ಅದೃಷ್ಟ ಎನ್ನುತ್ತಾರೆ ನಂದಾ. ಹೀಗಿದ್ದೂ ಹಣಕಾಸಿನ ಕೊರತೆ ಉಂಟಾದರೆ ಸ್ನೇಹಿತರ ಸಹಾಯ ಕೇಳುತ್ತೇನೆ ಎಂದು ಹೇಳುತ್ತಾರೆ.

ವೆಲಾಸಿಟಿ ಉತ್ಸವದಲ್ಲಿ ಎಂವಿಪಿ ಟ್ರ್ಯಾಕ್‌ ಕ್ಲಬ್‌ ಪ್ರತಿನಿಧಿಸಿದ್ದ ಅವರು, ಹೀಟ್ಸ್‌ನಲ್ಲಿ 11.78 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಗಳಿಸಿದ್ದರು.

ನಂದಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊನೆಯ ಬಾರಿ ಪದಕ ಗೆದ್ದಿದ್ದು 2017ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಕೂಟದ 4x100 ಮೀಟರ್‌ ರಿಲೆ ವಿಭಾಗದಲ್ಲಿ ಅವರಿಗೆ ಕಂಚು ಒಲಿದಿತ್ತು. ಆ ಬಳಿಕ ಅವರಿಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್‌ ಪಡೆಯುವ ಅದಮ್ಯ ವಿಶ್ವಾಸ ಅವರಲ್ಲಿದೆ. ಆದರೂ ಅದು ಸರಳ ಹಾದಿಯೇನೂ ಅಲ್ಲ. 100 ಹಾಗೂ 200 ಮೀ. ಓಟಗಳಲ್ಲಿ ಕ್ರಮವಾಗಿ 11.15 ಸೆಕೆಂಡು ಹಾಗೂ 22.80 ಸೆಕೆಂಡುಗಳ ಅವಧಿ ಒಲಿಂಪಿಕ್ಸ್ ಪ್ರವೇಶದ‌ ಅರ್ಹತಾ ಮಾನದಂಡಗಳಾಗಿವೆ.

‘ಸದ್ಯ ನಾನು ಎರಡೂ ವಿಭಾಗಗಳಲ್ಲಿ (100 ಹಾಗೂ 200 ಮೀ. ಓಟ) ತರಬೇತಿ ಪಡೆಯುತ್ತಿದ್ದೇನೆ. ಎರಡರಲ್ಲೂ ಅರ್ಹತೆ ಗಳಿಸುವ ವಿಶ್ವಾಸವಿದೆ. ಸಾಧ್ಯವಾದಷ್ಟು ಉತ್ತಮ ಸಾಮರ್ಥ್ಯ ತೋರುವತ್ತ ಚಿತ್ತ ನೆಟ್ಟಿದ್ದೇನೆ’ ಎಂದು ನಂದಾ ನುಡಿದರು.

100 ಹಾಗೂ 200 ಮೀಟರ್‌ ಓಟದಲ್ಲಿ ಕ್ರಮವಾಗಿ 11.45 ಹಾಗೂ 23.07 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದು ಅವರ ಇದುವರೆಗಿನ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.