ADVERTISEMENT

Commonwealth Games 2022 | ಈಜು: ಶ್ರೀಹರಿ ಕೈತಪ್ಪಿದ ಪದಕ

ಈಜು: 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಐದನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 11:04 IST
Last Updated 2 ಆಗಸ್ಟ್ 2022, 11:04 IST
ಶ್ರೀಹರಿ ನಟರಾಜ್ –ಪಿಟಿಐ ಚಿತ್ರ
ಶ್ರೀಹರಿ ನಟರಾಜ್ –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್ (ಪಿಟಿಐ): ಭಾರತದ ಶ್ರೀಹರಿ ನಟರಾಜ್‌ ಅವರು ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್‌ ಈಜು ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡು, ಐದನೇ ಸ್ಥಾನ ಪಡೆದುಕೊಂಡರು.

ಸೋಮವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಶ್ರೀಹರಿ 25.23 ಸೆ.ಗಳಲ್ಲಿ ಗುರಿ ತಲುಪಿದರು. ನ್ಯೂಜಿಲೆಂಡ್‌ನ ಆ್ಯಂಡ್ರ್ಯೂ ಜೆಫ್‌ಕೋಟ್‌ 24.65 ಸೆ.ಗಳಲ್ಲಿ ಚಿನ್ನ ಗೆದ್ದರೆ, ದಕ್ಷಿಣ ಆಫ್ರಿಕಾದ ಪೀಟರ್‌ ಕೊಯೆಟ್ಜ್‌ (24.77 ಸೆ.) ಬೆಳ್ಳಿ ಹಾಗೂ ಕೆನಡದ ಜೇವಿಯರ್‌ ಅಸೆವೆಡೊ (24.97 ಸೆ.) ಕಂಚು ಪಡೆದರು.

ಶ್ರೀಹರಿ ಅವರು ಅಸೆವೆಡೊ ಅವರಿಗಿಂತ 0.27 ಸೆ.ಗಳಷ್ಟು ತಡವಾಗಿ ಗುರಿ ತಲುಪಿ, ಅಲ್ಪ ಅಂತರದಲ್ಲಿ ಪದಕವನ್ನು ತಪ್ಪಿಸಿಕೊಂಡರು.

ADVERTISEMENT

100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದಿದ್ದ ಶ್ರೀಹರಿ, 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಪದಕಕ್ಕಾಗಿ ಪ್ರಯತ್ನಿಸಲಿದ್ದಾರೆ.

ಸಜನ್‌ ಸವಾಲು ಅಂತ್ಯ: ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತದ ಇನ್ನೊಬ್ಬ ಈಜುಪಟು ಸಜನ್‌ ಪ್ರಕಾಶ್‌ ಅವರ ಸವಾಲು ಕೊನೆಗೊಂಡಿದೆ.

100 ಮೀ. ಬಟರ್‌ಫ್ಲೈ ಸೆಮಿಫೈನಲ್‌ನಲ್ಲಿ ಅವರು 54.24 ಸೆ.ಗಳಲ್ಲಿ ಗುರಿ ತಲುಪಿ 16ನೇ ಸ್ಥಾನ ಪಡೆದುಕೊಂಡು ಫೈನಲ್‌ ಪ್ರವೇಶಿಸಲು ವಿಫಲರಾದರು.

ಇದಕ್ಕೂ ಮುನ್ನ ಸಜನ್‌, ಹೀಟ್ಸ್‌ನಲ್ಲಿ 19ನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ಸೆಮಿಫೈನಲ್‌ ಪ್ರವೇಶಿಸಿದ್ದ ಮೂವರು ಸ್ಪರ್ಧಿಗಳು ಹಿಂದೆ ಸರಿದ ಕಾರಣ ಸಜನ್‌ಗೆ ಸೆಮಿಯಲ್ಲಿ ಕಣಕ್ಕಿಳಿಯಲು ಅವಕಾಶ ಲಭಿಸಿತ್ತು.

ಪ್ಯಾರಾ ಈಜು ಸ್ಪರ್ಧೆಯ ಪುರುಷರ 50 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಸುಯಾಶ್ ನಾರಾಯಣ್‌ ಯಾದವ್ (31.30 ಸೆ.) ಮತ್ತು ನಿರಂಜನ್‌ ಮುಕುಂದನ್‌ (32.55 ಸೆ.) ಕ್ರಮವಾಗಿ ಐದು ಹಾಗೂ ಏಳನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.