ADVERTISEMENT

ಬ್ಯಾಡ್ಮಿಂಟನ್ ಟೂರ್ನಿ: ಶ್ರೀಕಾಂತ್‌, ಸಿಂಧುಗೆ ಜಯದ ಆರಂಭ

ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ

ಪಿಟಿಐ
Published 8 ಮಾರ್ಚ್ 2022, 14:15 IST
Last Updated 8 ಮಾರ್ಚ್ 2022, 14:15 IST
ಕಿದಂಬಿ ಶ್ರೀಕಾಂತ್‌– ಎಎಫ್‌ಪಿ ಚಿತ್ರ
ಕಿದಂಬಿ ಶ್ರೀಕಾಂತ್‌– ಎಎಫ್‌ಪಿ ಚಿತ್ರ   

ಮುಲ್ಹೆಮ್‌ ಆ್ಯನ್ ಡರ್‌ ರುಹ್ರ್‌, ಜರ್ಮನಿ:ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಅವರುಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವಿನ ಆರಂಭ ಮಾಡಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್‌ ಅವರು ಫ್ರಾನ್ಸ್‌ನ ಬ್ರೈಸ್ ಲೆವರ್ಡೆಜ್ ಅವರನ್ನು ಪರಾಭವಗೊಳಿಸಿದರು. 48 ನಿಮಿಷಗಳಜಿದ್ದಾಜಿದ್ದಿನ ಹಣಾಹಣಿಯಲ್ಲಿ ಎಂಟನೇ ಶ್ರೇಯಾಂಕದ ಭಾರತದ ಆಟಗಾರ21-10, 13-21, 21-7ರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ 39ನೇ ಸ್ಥಾನದಲ್ಲಿರುವ ಆಟಗಾರನ ಸವಾಲು ಮೀರಿದರು.

ಇದರೊಂದಿಗೆ ಲೆವರ್ಡೆಜ್ ಎದುರು ಆಡಿದ ನಾಲ್ಕೂ ಪಂದ್ಯಗಳಲ್ಲೂ ಶ್ರೀಕಾಂತ್ ಜಯ ಸಾಧಿಸಿದಂತಾಗಿದೆ.

ADVERTISEMENT

ಮುಂದಿನ ಸುತ್ತಿನ ಹಣಾಹಣಿಯಲ್ಲಿ ಶ್ರೀಕಾಂತ್ ಅವರು ಚೀನಾದ ಲು ಗುವಾಂಗ್‌ ಜು ಅವರನ್ನು ಎದುರಿಸುವರು. ವಿಶ್ವ ಕ್ರಮಾಂಕದಲ್ಲಿ 27ನೇ ಸ್ಥಾನದಲ್ಲಿರುವ ಗುವಾಂಗ್ ವಿರುದ್ಧ ಭಾರತದ ಆಟಗಾರ ಈ ಹಿಂದೆ ಆಡಿದ ಎರಡೂ ಪಂದ್ಯಗಳಲ್ಲೂ ಜಯ ಸಾಧಿಸಿದ ದಾಖಲೆ ಹೊಂದಿದ್ದಾರೆ.

ಮೊದಲ ಗೇಮ್‌ನ ಆರಂಭದಲ್ಲಿ 6–6ರಿಂದ ಸಮಬಲದಲ್ಲಿದ್ದ ಪಂದ್ಯವನ್ನು 19–8ಕ್ಕೆ ಕೊಂಡೊಯ್ದ ಶ್ರೀಕಾಂತ್, ಸುಲಭವಾಗಿ ಗೆದ್ದುಕೊಂಡರು. ಆದರೆ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದಲೆವರ್ಡೆಜ್, ಆರಂಭದಿಂದಲೂ ಪಾರಮ್ಯ ಮೆರೆ‌ದು ಗೇಮ್ ತಮ್ಮದಾಗಿಸಿಕೊಂಡರು.

ಮೂರನೇ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಲಯ ಕಂಡುಕೊಂಡ ಭಾರತದ ಆಟಗಾರ ನಿರಂತರವಾಗಿ ಪಾಯಿಂಟ್ಸ್ ಕಲೆಹಾಕುತ್ತ ಸಾಗಿದರು. ಆರಂಭದಲ್ಲಿ 11–5ರಿಂದ ಮುನ್ನಡೆ ಗಳಿಸಿದ ಅವರು ಅದೇ ಲಯದೊಂದಿಗೆ 18–7ರಿಂದ ಮೇಲುಗೈ ಪಡೆದು ಗೇಮ್‌ನೊಂದಿಗೆ ಪಂದ್ಯವನ್ನೂ ಜಯಿಸಿ ಸಂಭ್ರಮಿಸಿದರು.

ಬುಸಾನನ್‌ಗೆ ಸೋಲುಣಿಸಿದ ಸಿಂಧು: ಇಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಸಿಂಧು, ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ21-8, 21-7ರಿಂದ ಥಾಯ್ಲೆಂಡ್‌ನ ಬುಸಾನನ್‌ ಒಂಗ್‌ಬಮ್ರುಂಗ್‌ಪನ್ ಅವರನ್ನು ಮಣಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಬುಸಾನನ್‌ ಎದುರು ಸಿಂಧು ಅವರಿಗೆ ಇದು 15ನೇ ಜಯವಾಗಿದೆ. 32 ನಿಮಿಷಗಳ ಪಂದ್ಯದಲ್ಲಿ ಭಾರತದ ಆಟಗಾರ್ತಿಗೆ ಹೆಚ್ಚಿನ ಪ್ರತಿರೋಧ ಎದುರಾಗಲಿಲ್ಲ.

ಮಿಶ್ರ ಡಬಲ್ಸ್‌ನಲ್ಲಿ ಸಾಯಿ ಪ್ರತೀಕ್‌– ಎನ್‌. ಸಿಕ್ಕಿರೆಡ್ಡಿ ಅವರು ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ಥಾಯ್ಲೆಂಡ್‌ನ, ಅಗ್ರಶ್ರೇಯಾಂಕದ ದೆಚ್‌ಪೊಲ್‌ ಪುವಾರಣುಕ್ರೊವ್‌– ಸಾಪ್‌ಸೈರಿ ತೀರತ್ತನಾಚೈ 21–19, 21–8ರಿಂದ ಭಾರತದ ಜೋಡಿಗೆ ಸೋಲುಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.