ADVERTISEMENT

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಮುನ್ನಡೆದ ಶ್ರೀಕಾಂತ್‌

ಪಿಟಿಐ
Published 17 ಡಿಸೆಂಬರ್ 2021, 16:35 IST
Last Updated 17 ಡಿಸೆಂಬರ್ 2021, 16:35 IST
ಕಿದಂಬಿ ಶ್ರೀಕಾಂತ್‌ ಆಟದ ಭಂಗಿ– ಎಎಫ್‌ಪಿ ಚಿತ್ರ
ಕಿದಂಬಿ ಶ್ರೀಕಾಂತ್‌ ಆಟದ ಭಂಗಿ– ಎಎಫ್‌ಪಿ ಚಿತ್ರ   

ವೆಲ್ವಾ, ಸ್ಪೇನ್‌: ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಕಿದಂಬಿ ಶ್ರೀಕಾಂತ್‌ ಹಾಗೂ ಲಕ್ಷ್ಯ ಸೇನ್ ಅವರು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎರಡು ಪದಕಗಳು ದೇಶಕ್ಕೆ ದೊರೆಯುವುದು ಖಚಿತವಾಗಿದೆ. ಆದರೆ ಪಿ.ವಿ. ಸಿಂಧು ಅವರ ಪ್ರಶಸ್ತಿ ಉಳಿಸಿಕೊಳ್ಳುವ ಕನಸು ನನಸಾಗಲಿಲ್ಲ.

ಪುರುಷರ ಸಿಂಗಲ್ಸ್ ಎಂಟರ ಘಟ್ಟದ ಹಣಾಹಣಿಯಲ್ಲಿ ಶುಕ್ರವಾರ 12ನೇ ಶ್ರೇಯಾಂಕದ ಶ್ರೀಕಾಂತ್‌ 21–8, 21–7ರಿಂದ ನೆದರ್ಲೆಂಡ್ಸ್‌ನ ಮಾರ್ಕ್‌ ಕಾಲ್ಜೊ ಸವಾಲು ಮೀರಿದರು. ಕೇವಲ 26 ನಿಮಿಷಗಳಲ್ಲಿ ಭಾರತದ ಆಟಗಾರನಿಗೆ ಗೆಲುವು ಒಲಿಯಿತು.

ಇನ್ನೊಂದು ಕ್ವಾರ್ಟರ್‌ಫೈನಲ್‌ ಸೆಣಸಾಟದಲ್ಲಿ ಲಕ್ಷ್ಯ ಸೇನ್ ಅವರು 21–15, 15–21, 22–20ರಿಂದ ಚೀನಾದ ಜುನ್‌ ಪೆಂಗ್ ಜಾವೊ ಅವ ರನ್ನು ಮಣಿಸಿದರು.ಶನಿವಾರ ನಡೆ ಯುವ ಸೆಮಿಫೈನಲ್‌ನಲ್ಲಿ ಲಕ್ಷ್ಯ ಹಾಗೂ ಶ್ರೀಕಾಂತ್ ಮುಖಾಮುಖಿಯಾಗುವರು.

ADVERTISEMENT

ವಿಶ್ವಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಕಾಶ್‌ ಪಡುಕೋಣೆ (1983) ಮತ್ತು ಬಿ.ಸಾಯಿ ಪ್ರಣೀತ್‌ (2019) ಕಂಚಿನ ಪದಕ ಗೆದ್ದುಕೊಂಡಿದ್ದರು. ಇವರಿಬ್ಬರ ಸಾಲಿಗೆ ಲಕ್ಷ್ಯ ಹಾಗೂ ಶ್ರೀಕಾಂತ್ ಸೇರಲಿದ್ದಾರೆ.

ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಸಿಂಧು ಐದು ಪದಕಗಳ ಒಡತಿಯಾಗಿದ್ದರೆ, ಸೈನಾ ನೆಹ್ವಾಲ್ ಎರಡು ಪದಕಗಳನ್ನು ಗಳಿಸಿದ್ದಾರೆ. 2011ರಲ್ಲಿ ಮಹಿಳಾ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಕಂಚು ಜಯಿಸಿದ್ದರು.

ಶ್ರೀಕಾಂತ್, ಈ ಪಂದ್ಯದ ಮೊದಲ ಗೇಮ್‌ನ ಆರಂಭದಲ್ಲಿ 11–5ರಿಂದ ಮುಂದಿದ್ದರು. ಬಳಿಕ ಇದು 14–8ಕ್ಕೆ ತಲುಪಿತು. ನಂತರ ಸತತ ಏಳು ಪಾಯಿಂಟ್ಸ್ ಕಲೆಹಾಕಿ ಗೇಮ್‌ ಕೈವಶ ಮಾಡಿಕೊಂಡರು.

2ನೇ ಗೇಮ್‌ನಲ್ಲೂ ಹೆಚ್ಚೇನೂ ವ್ಯತ್ಯಾಸವಾಗಲಿಲ್ಲ. ಆರಂಭದಲ್ಲಿ 4–3ರಿಂದ ಮುಂದಿದ್ದ ಭಾರತದ ಆಟಗಾರ ಸತತ ಏಳು ಪಾಯಿಂಟ್ಸ್ ಗಳಿಸಿ 17–7ರಿಂದ ಮೇಲುಗೈ ಸಾಧಿಸಿದರು. ಮತ್ತೆ ಸತತ 4 ಪಾಯಿಂಟ್ಸ್ ಸಂಗ್ರಹಿಸಿದರು.

ತೈಜು ಎದುರು ಮಂಕಾದ ಸಿಂಧು
ಪಿ.ವಿ. ಸಿಂಧು ಪ್ರಶಸ್ತಿ ಉಳಿಸಿಕೊಳ್ಳುವ ಆಸೆಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ, ಚೀನಾ ತೈಪೆ ಆಟಗಾರ್ತಿ ತೈ ಜು ಯಿಂಗ್‌ ತಣ್ಣೀರೆರೆಚಿದರು.

ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ತೈ ಜು 21–17, 21–15ರಿಂದ ಭಾರತದ ಆಟಗಾರ್ತಿಗೆ ಸೋಲುಣಿಸಿದರು. 42 ನಿಮಿಷಗಳ ಹಣಾಹಣಿಯಲ್ಲಿ ಸಿಂಧು ಹಲವು ಲೋಪಗಳನ್ನು ಎಸಗಿದ್ದು ಮುಳುವಾಯಿತು.

ಸಿಂಧು ಎದುರು ತೈ ಜುಗೆ ಒಲಿದ 15ನೇ ಗೆಲುವು ಇದು. ಚೀನಾ ತೈಪೆ ಆಟಗಾರ್ತಿ ವಿರುದ್ಧ ಸಿಂಧು ಐದು ಬಾರಿ ಮೇಲುಗೈ ಸಾಧಿಸಿದ್ದರು.

ಪಂದ್ಯದಲ್ಲಿ ತೈ ಜು ಅವರ ವೇಗ ಹಾಗೂ ಚುರುಕಿನ ಆಟಕ್ಕೆ ಸಮನಾಗಿ ನಿಲ್ಲಲು ಹಾಗೂ ಅಂಗಣ ‘ಕವರ್‌‘ ಮಾಡುವಲ್ಲಿ ಸಿಂಧು ವಿಫಲರಾದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ, ಎರಡು ಒಲಿಂಪಿಕ್ಸ್ ಪದಕ ವಿಜೇತೆ, ಟೋಕಿಯೊ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲೂ ತೈ ಜು ಎದುರು ಎಡವಿದ್ದರು.

2019ರಲ್ಲಿ ಸಿಂಧು, ತೈ ಜು ಅವರನ್ನು ಮಣಿಸಿಯೇ ವಿಶ್ವ ಚಾಂಪಿಯನ್‌ಷಿಪ್‌ ಕಿರೀಟ ಧರಿಸಿದ್ದರು.

ಮೊದಲ ಗೇಮ್‌ನ ಆರಂಭದಲ್ಲಿತೈ ಜು 11–6ರಿಂದ ಮುನ್ನಡೆ ಸಾಧಿಸಿದ್ದರು. ಚೇತರಿಸಿಕೊಂಡ ಸಿಂಧು 16–18ಕ್ಕೆ ಹಿನ್ನಡೆಯನ್ನು ತಗ್ಗಿಸಿಕೊಂಡರು. ಆದರೆ ಅದೇ ಲಯ ಮುಂದುವರಿಸುವಲ್ಲಿ ವಿಫಲರಾಗಿ 17 ನಿಮಿಷಗಳ ಗೇಮ್‌ನಲ್ಲಿ ನಿರಾಸೆ ಅನುಭವಿಸಿದರು. ಎರಡನೇ ಗೇಮ್‌ನಲ್ಲಿ ಸಿಂಧು ಹೆಚ್ಚು ಪ್ರತಿರೋಧ ತೋರಿದರೂ ಪಂದ್ಯ ತೈಪೆ ಆಟಗಾರ್ತಿಯ ಕೈವಶವಾಗುವುದನ್ನು ತಪ್ಪಿಸಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.