ADVERTISEMENT

ಥಾಯ್ಲೆಂಡ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: 2ನೇ ಸುತ್ತಿಗೆ ಮುನ್ನಡೆದ ಶ್ರೀಕಾಂತ್‌

ಕಶ್ಯಪ್‌ ನಿವೃತ್ತಿ

ಪಿಟಿಐ
Published 13 ಜನವರಿ 2021, 13:01 IST
Last Updated 13 ಜನವರಿ 2021, 13:01 IST
ಕಿದಂಬಿ ಶ್ರೀಕಾಂತ್‌–ಪಿಟಿಐ ಚಿತ್ರ
ಕಿದಂಬಿ ಶ್ರೀಕಾಂತ್‌–ಪಿಟಿಐ ಚಿತ್ರ   

ಬ್ಯಾಂಕಾಕ್‌: ಅಮೋಘ ಆಟವಾಡಿದ ಭಾರತದ ಕಿದಂಬಿ ಶ್ರೀಕಾಂತ್, ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಮೀನಖಂಡದ ಸೆಳೆತ ಅನುಭವಿಸಿದ ಪರುಪಳ್ಳಿ ಕಶ್ಯಪ್‌ ಪಂದ್ಯದ ಅರ್ಧದಲ್ಲೇ ನಿವೃತ್ತರಾದರು.

ಶ್ರೀಕಾಂತ್ ಮೊದಲ ಸುತ್ತಿನ ಹಣಾಹಣಿಯಲ್ಲಿ 21–12, 21–11ರಿಂದ ಭಾರತದವರೇ ಆದ ಸೌರಭ್ ವರ್ಮಾ ಅವರ ಸವಾಲು ಮೀರಿದರು. ಸೌರಭ್ ಎದುರು ಗೆಲ್ಲಲು ಶ್ರೀಕಾಂತ್‌ ಅವರಿಗೆ ಕೇವಲ 31 ನಿಮಿಷಗಳು ಬೇಕಾದವು.

ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾದ ಜೇಸನ್ ಅಂಥೋನಿ ಹೊ ಶುಯ್‌ ಎದುರು ಕಣಕ್ಕಿಳಿದಿದ್ದ ಕಾಮನ್‌ವೆಲ್ತ್‌ ಗೇಮ್ಸ್ ಚಾಂಪಿಯನ್‌ ಕಶ್ಯಪ್‌, ಮೂರನೇ ಗೇಮ್‌ನಲ್ಲಿ 8–14ರಿಂದ ಹಿಂದಿದ್ದರು. ಈ ವೇಳೆ ಅವರಿಗೆ ಮೀನಖಂಡದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿವೃತ್ತರಾಗಬೇಕಾಯಿತು. ಮೊದಲ ಗೇಮ್‌ಅನ್ನು 9–21ರಿಂದ ಕೈಚೆಲ್ಲಿದ್ದ ಕಶ್ಯಪ್‌, ಎರಡನೇ ಗೇಮ್‌ನಲ್ಲಿ 21–13ರಿಂದ ಗೆದ್ದು ಸಮಬಲ ಸಾಧಿಸಿದ್ದರು.

ADVERTISEMENT

ಸಾತ್ವಿಕ್‌ಸಾಯಿರಾಜ್‌–ಚಿರಾಗ್‌ಗೆ ಗೆಲುವು: ಪುರುಷರ ಡಬಲ್ಸ್‌ ವಿಭಾಗದಲ್ಲಿ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿಯು 19–21, 21–16, 21–14ರಿಂದ ದಕ್ಷಿಣ ಕೊರಿಯಾದ ಕಿಮ್‌ ಗಿ ಜಂಗ್‌–ಲೀ ಯೊಂಗ್ ಡೇ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.

ತಾವು ಆದರ್ಶವಾಗಿಟ್ಟುಕೊಂಡ ಆಟಗಾರನ ವಿರುದ್ಧವೇ ಗೆದ್ದಿದ್ದು ಸಾತ್ವಿಕ್ ಹಾಗೂ ಚಿರಾಗ್ ಅವರಿಗೆ ಖುಷಿ ತಂದಿದೆ.

‘ನಾವು ಬ್ಯಾಡ್ಮಿಂಟನ್ ಆಡಲು ಆರಂಭಿಸಿದ ಸಂದರ್ಭದಲ್ಲಿ ಲೀ ಯೊಂಗ್ ಡೇ ನಮ್ಮಿಬ್ಬರಿಗೆ ಆದರ್ಶವಾಗಿದ್ದರು. ಅವರ ವಿರುದ್ಧ ಆಡಿ ಜಯ ಸಾಧಿಸಿದ್ದು ಬಹಳ ಸಂತಸದ ಸಂಗತಿ‘ ಎಂದು ಸಾತ್ವಿಕ್ ಹೇಳಿದರು.

ಭಾರತದ ಇನ್ನೊಂದು ಜೋಡಿ ಎಂ.ಆರ್‌.ಅರ್ಜುನ್‌–ಧೃವ ಕಪಿಲ ಅಭಿಯಾನ ಅಂತ್ಯವಾಯಿತು. ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು 21–13, 8–21, 22–24ರಿಂದ ಮಲೇಷ್ಯಾದ ಒಂಗ್‌ ಯೆವ್‌ ಸಿನ್‌–ಟಿಯೊ ಯೆ ಯಿ ಅವರಿಗೆ ಸೋತರು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಎನ್‌.ಸಿಕ್ಕಿ ರೆಡ್ಡಿ– ಬಿ.ಸುಮಿತ್‌ ರೆಡ್ಡಿ ಅವರು 20-22, 17-21ರಿಂದ ಹಾಂಗ್‌ಕಾಂಗ್‌ನ ಚುಂಗ್ ಮಾನ್‌ ತಾಂಗ್‌–ಯಾಂಗ್‌ ಸ್ಯೂಟ್ ಸೆ ಎದುರು ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.