ADVERTISEMENT

ರಾಜ್ಯ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ಗೋರೆ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 12:24 IST
Last Updated 1 ಮಾರ್ಚ್ 2021, 12:24 IST
ಶ್ರೀಧರ ಗೋರೆ
ಶ್ರೀಧರ ಗೋರೆ   

ವಿಜಯಪುರ: ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ಶ್ರೀಧರ ಮಾರುತಿರಾವ್ ಗೋರೆ (66) ಸೋಮವಾರ ಹೃದಯಾಘಾತದಿಂದ ನಿಧನರಾದರು.

ವಿಜಯಪುರದ ನಿವಾಸಿಯಾದ ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ಕಳೆದ 21 ವರ್ಷಗಳಿಂದ ಅವರು ರಾಜ್ಯ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷರಾಗಿದ್ದರು. ಪ್ರತಿ ಬಾರಿಯೂ ಅವಿರೋಧವಾಗಿ ಆಯ್ಕೆಯಾಗಿದ್ದು ವಿಶೇಷ. ಭಾರತ ಸೈಕ್ಲಿಂಗ್ ಫೆಡರೇಷನ್‌ ‌ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಉಪಾಧ್ಯಕ್ಷರೂ ಆಗಿದ್ದರು.

ADVERTISEMENT

2005ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ವ್ಯವಸ್ಥಾಪಕರಾಗಿ ತೆರಳಿದ್ದರು. 2002ರಲ್ಲಿ ಬೆಳಗಾವಿಯಲ್ಲಿ, 2006ರಲ್ಲಿ ವಿಜಯಪುರಲ್ಲಿ, 2008, 2014 ಹಾಗೂ 2017ರಲ್ಲಿ ಜಮಖಂಡಿಯಲ್ಲಿ ಗೋರೆ ಅವರ ಮುಂದಾಳತ್ವದಲ್ಲಿ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ ಷಿಪ್ ನಡೆದಿತ್ತು.

ಇತ್ತೀಚೆಗೆ ಗದಗನಲ್ಲಿ ಜರುಗಿದ್ದ ಚೊಚ್ಚಲ ರಾಷ್ಟ್ರೀಯ ಮೌಂಟೆನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ ಷಿಪ್ ಯಶಸ್ವಿಗೊಳಿಸುವಲ್ಲಿ ಶ್ರಮಿಸಿದ್ದರು.‌ ಅಲ್ಲಿನ ಟೂರ್ನಿ ಬಳಿಕ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಯಲ್ಲಿ ಎರಡು ದಿನ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.

ಮೂಲತಃ ಹೋಟೆಲ್ ಉದ್ಯಮಿಯಾಗಿದ್ದ ಶ್ರೀಧರ ಗೋರೆ, ದೇಶದ ಯಾವ ಊರಿನಲ್ಲಿ ಸೈಕ್ಲಿಂಗ್‌ಗೆ ಸಂಬಂಧಿಸಿದ ಚಟುವಟಿಕೆಗಳು‌ ನಡೆದರೆ ಅಲ್ಲಿ ಹಾಜರಿರುತ್ತಿದ್ದರು. ಸೈಕ್ಲಿಸ್ಟ್ ಅಲ್ಲದಿದ್ದರೂ ಹಲವಾರು ಸೈಕ್ಲಿಸ್ಟ್‌ಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ.

ಎಸ್ಎಸ್ಎಲ್ ಸಿ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೋಟೆಲ್ ಉದ್ಯಮ ಆರಂಭಿಸಿದರು. ಅಂತರರಾಷ್ಟ್ರೀಯ ಸೈಕ್ಲಿಸ್ಟ್ ಚಂದ್ರಪ್ಪ ಕುರಣಿ ಅವರಿಂದ ಈ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಕಳೆದ ನಾಲ್ಕು ದಶಕಗಳಿಂದ ಸೈಕ್ಲಿಂಗ್ ಬೆಳವಣಿಗೆಗೆ ಅವರು ದುಡಿದಿದ್ದಾರೆ.

ಅವರ ಜೊತೆಗಿನ ನೆನಪುಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ ಗೋರೆ, ಸೈಕ್ಲಿಂಗ್ ಬಗ್ಗೆಅವರಿಗೆ ಅಪಾರ ಪ್ರೀತಿ, ಗೌರವವಿತ್ತು. ಈ ಕಾರಣಕ್ಕಾಗಿ ಎಲ್ಲಿಯೇ ಟೂರ್ನಿಗಳು ನಡೆದರೂ ಅವರು ಹೋಗುತ್ತಿದ್ದರು. ಸೈಕ್ಲಿಂಗ್ ಕ್ರೀಡೆ ಬೆಳವಣಿಗೆಗೆ ಅವರಷ್ಟು ದುಡಿದವರು ಇನ್ನೊಬ್ಬರಿಲ್ಲ ಎಂದು ಭಾವುಕರಾದರು.

ಗೋರೆ ಅವರು ತಮ್ಮ ಸಹೋದರರಿಗೆ ಸೈಕ್ಲಿಂಗ್‌ ಕಲಿಯಲು ಪ್ರೋತ್ಸಾಹಿಸಿದರು. ಅವರ ಶ್ರಮದ ಫಲದಿಂದಲೇ ಕರ್ನಾಟಕದ ಸೈಕ್ಲಿಸ್ಟ್‌ಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ ಎಂದರು.

ಅಂತಿಮ ದರ್ಶನ

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಅವರು ಶ್ರೀಧರ ಗೋರೆ ಅವರ ನಿವಾಸಕ್ಕೆ ತೆರಳಿ, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.