ADVERTISEMENT

ರಾಜ್ಯ ಮಿನಿ ಒಲಿಂಪಿಕ್ಸ್ 3ರಿಂದ

18 ವಿಭಾಗಗಳಲ್ಲಿ ಸ್ಪರ್ಧೆ; ಉತ್ತಮ ಕ್ರೀಡಾಪಟುಗಳಿಗೆ ಹಾಸ್ಟೆಲ್ ಪ್ರವೇಶ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 18:06 IST
Last Updated 27 ಜನವರಿ 2020, 18:06 IST

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,‌ ರಾಜ್ಯ ಒಲಿಂಪಿಕ್ ಸಂಸ್ಥೆಯ (ಕೆಒಎ) ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯ ಮಿನಿ ಒಲಿಂಪಿಕ್ಸ್‌ ಫೆಬ್ರುವರಿ ಮೂರರಿಂದ ಒಂಬತ್ತರ ವರೆಗೆ ನಗರದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ.

‘14 ವರ್ಷದೊಳಗಿನವರಿಗಾಗಿ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು ದೇಶದಲ್ಲಿ ಇಂಥ ಪ್ರಯೋಗ ನಡೆಯುತ್ತಿರುವುದು ಇದೇ ಮೊದಲು. ರಾಜ್ಯ ಸರ್ಕಾರ ಇದಕ್ಕಾಗಿ ₹ 2 ಕೋಟಿ ಮೊತ್ತವನ್ನು ಮೀಸಲಿರಿಸಿದೆ’ ಎಂದು ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಂಠೀರವ ಕ್ರೀಡಾಂಗಣದಲ್ಲಿ ಮೂರರಂದು ಸಂಜೆ ಐದು ಗಂಟೆಗೆ ಮುಖ್ಯಮುಂತ್ರಿ ಬಿ.ಎಸ್.ಯಡಿಯೂರಪ್ಪ ಕೂಟವನ್ನು ಉದ್ಘಾಟಿಸುವರು. ಒಂಬತ್ತರಂದು ಸಂಜೆ ಐದು ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ತಾಂತ್ರಿಕ ಸಿಬ್ಬಂದಿ ಮತ್ತು ಕ್ರೀಡಾಪಟುಗಳು ಸೇರಿ ಒಟ್ಟು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದು ಸಚಿವರು ವಿವರಿಸಿದರು.

ADVERTISEMENT

‘18 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಪ್ರತಿ ವಿಭಾಗದಲ್ಲಿ ಜಿಲ್ಲೆಗಳಿಂದ ತಲಾ ಎಂಟು ತಂಡಗಳು ಅಥವಾ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಸ್ಪರ್ಧಾಳುಗಳನ್ನು ಆಯಾ ವಿಭಾಗದ ಜಿಲ್ಲಾ ಸಂಸ್ಥೆಗಳು ಆಯ್ಕೆ ಮಾಡಲಿವೆ. ವಿಜೇತರಿಗೆ ಪದಕಗಳನ್ನು ವಿತರಿಸಲಾಗುವುದು. ಪಾಲ್ಗೊಳ್ಳುವ ಎಲ್ಲರಿಗೂ ಪ್ರಮಾಣ ಪತ್ರವೂ ಸಿಗಲಿದೆ’ ಎಂದು ಅವರು ತಿಳಿಸಿದರು.

ಹಾಸ್ಟೆಲ್ ಪ್ರವೇಶಕ್ಕೆ ಅವಕಾಶ: ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ತೋರುವವರಿಗೆ ರಾಜ್ಯದ ಕ್ರೀಡಾ ವಸತಿ ನಿಲಯಗಳಲ್ಲಿ ನೇರ ಪ್ರವೇಶಕ್ಕೆ ಅವಕಾಶವಿದೆ. ಕ್ರೀಡಾಕೂಟದ ಮಾಹಿತಿಗಾಗಿ ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್ (www.miniolympics-koa.in) ಸಿದ್ಧಗಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್ ಹಾಗೂ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕಲ್ಪನಾ ಇದ್ದರು.

ಕ್ರೀಡಾಕೂಟದ ವಿವರ

ಕ್ರೀಡೆ;ನಡೆಯುವ ಸ್ಥಳ;ಅವಧಿ

ಅಥ್ಲೆಟಿಕ್ಸ್‌;ಕಂಠೀರವ ಕ್ರೀಡಾಂಗಣ;ಫೆ.6–8

ಬ್ಯಾಡ್ಮಿಂಟನ್;ಕಂಠೀರವ ಕ್ರೀಡಾಂಗಣ;ಫೆ.5–9

ಬ್ಯಾಸ್ಕೆಟ್‌ಬಾಲ್;ಕಂಠೀರವ ಕ್ರೀಡಾಂಗಣ;ಫೆ.7–9

ಜಿಮ್ನಾಸ್ಟಿಕ್ಸ್‌;ಗೋಪಾಲನ್ ಸ್ಪೋರ್ಟ್ಸ್ ಸೆಂಟರ್;ಫೆ.4–6

ಹ್ಯಾಂಡ್‌ಬಾಲ್;ಜೆಎನ್‌ಎನ್‌ವೈಸಿ ವಿದ್ಯಾನಗರ;ಫೆ.7–9

ಹಾಕಿ;ಕಾರ್ಯಪ್ಪ ಕ್ರೀಡಾಂಗಣ ಶಾಂತಿನಗರ;ಫೆ.3–9

ಬಾಕ್ಸಿಂಗ್‌;ಕಂಠೀರವ ಕ್ರೀಡಾಂಗಣ;ಫೆ.4–6

ಫೆನ್ಸಿಂಗ್‌;ಕಂಠೀರವ ಕ್ರೀಡಾಂಗಣ;ಫೆ.4–5

ಫುಟ್‌ಬಾಲ್‌;ಕಂಠೀರವ ಕ್ರೀಡಾಂಗಣ;ಫೆ.3–6

ಜೂಡೊ;ಕಂಠೀರವ ಕ್ರೀಡಾಂಗಣ;ಫೆ.3–5

ಕೊಕ್ಕೊ;ಜೆಎನ್‌ಎನ್‌ವೈಸಿ ವಿದ್ಯಾನಗರ;ಫೆ.5–7

ಕಬಡ್ಡಿ;ಕಂಠೀರವ ಕ್ರೀಡಾಂಗಣ;ಫೆ.4–6

ಲಾನ್ ಟೆನಿಸ್;ಮಹಿಳಾ ಸೇವಾ ಸಮಾಜ;ಫೆ.3–7

ನೆಟ್‌ಬಾಲ್;ಜೆಎನ್‌ಎನ್‌ವೈಸಿ ವಿದ್ಯಾನಗರ;ಫೆ.3–5

ಈಜು;ಬಸವನಗುಡಿ ಈಜು ಕೇಂದ್ರ;ಫೆ.4–5

ಟೇಬಲ್ ಟೆನಿಸ್;ಕಂಠೀರವ ಕ್ರೀಡಾಂಗಣ;ಫೆ.6–9

ಟೇಕ್ವಾಂಡೊ;ಕಂಠೀರವ ಕ್ರೀಡಾಂಗಣ;ಫೆ.7–9

ವಾಲಿಬಾಲ್;ಕಂಠೀರವ ಕ್ರೀಡಾಂಗಣ;ಫೆ.3–5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.