ADVERTISEMENT

ಸುದಿರ್‌ಮನ್ ಕಪ್ ಬ್ಯಾಡ್ಮಿಂಟನ್‌ ಟೂರ್ನಿ: ಚೀನಾ ಎದುರು ಸೋತ ಭಾರತ

ನಾಕೌಟ್‌ ಪ್ರವೇಶದ ಕನಸು ಭಗ್ನ

ಪಿಟಿಐ
Published 27 ಸೆಪ್ಟೆಂಬರ್ 2021, 14:07 IST
Last Updated 27 ಸೆಪ್ಟೆಂಬರ್ 2021, 14:07 IST
ಬಿ. ಸಾಯಿ ಪ‍್ರಣೀತ್‌– ಎಎಫ್‌ಪಿ ಚಿತ್ರ
ಬಿ. ಸಾಯಿ ಪ‍್ರಣೀತ್‌– ಎಎಫ್‌ಪಿ ಚಿತ್ರ   

ವಂಟಾ, ಫಿನ್ಲೆಂಡ್‌: ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ಭಾರತ, ಸುದಿರ್‌ಮನ್‌ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮತ್ತೆ ನಿರಾಸೆ ಅನುಭವಿಸಿತು. ಸೋಮವಾರ ನಡೆದ ಸೆಣಸಾಟದಲ್ಲಿ 0–5ರಿಂದ ಚೀನಾ ಎದುರು ಸೋಲು ಮೂಲಕ ನಾಕೌಟ್‌ ಹಂತಕ್ಕೇರುವ ಅವಕಾಶವನ್ನು ಕಳೆದುಕೊಂಡಿತು.

‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತದ ಆಟಗಾರರು ಭಾನುವಾರ ಥಾಯ್ಲೆಂಡ್ ಎದುರು ಎಡವಿದ್ದರು. ಹೀಗಾಗಿ ಆತಿಥೇಯ ಫಿನ್ಲೆಂಡ್‌ ಎದುರು ಬುಧವಾರ ನಿಗದಿಯಾಗಿರುವ ಪಂದ್ಯ ಮಹತ್ವ ಕಳೆದುಕೊಂಡಿದೆ.

ಪ್ರಬಲ ಚೀನಾ ತಂಡವನ್ನು ಮಣಿಸುವುದು ಭಾರತಕ್ಕೆ ಸುಲಭವೇನೂ ಆಗಿರಲಿಲ್ಲ. ಆದರೆಯುವ ಮತ್ತು ಅನುಭವಿಗಳನ್ನೊಳಗೊಂಡ ತಂಡಕ್ಕೆ ಒಂದೇ ಒಂದು ಪಂದ್ಯವನ್ನೂ ಗೆಲ್ಲಲಾಗಲಿಲ್ಲ. ಒಲಿಂಪಿಕ್ಸ್‌ನಲ್ಲಿ ಎರಡು ಪದಕ ವಿಜೇತ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಹಾಗೂ ಚಿರಾಗ್‌ ಶೆಟ್ಟಿ–ಸಾತ್ವಿಕ್‌ ಸಾಯಿರಾಜ್ ರಣಕಿ ರೆಡ್ಡಿ ಅವರ ಅನುಪಸ್ಥಿತಿಯಲ್ಲಿ ಭಾರತ ಕಳಪೆ ಸಾಮರ್ಥ್ಯ ತೋರಿತು.

ADVERTISEMENT

ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌. ಅರ್ಜುನ್– ಧೃವ ಕಪಿಲ್‌ ಜಿದ್ದಾಜಿದ್ದಿ ಪೈಪೋಟಿಯಲ್ಲಿ 20-22, 17-21ರಿಂದ ಚೀನಾದ ಲಿವು ಚೆಂಗ್‌– ಜೊ ಹೊ ಡಾಂಗ್ ಎದುರು ಮಣಿದರು. ಅದಿತಿ ಭಟ್‌ ಅವರನ್ನು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚೆನ್ ಯು ಫೆ 21–9, 21–8ರಿಂದ ಸುಲಭವಾಗಿ ಸೋಲಿಸಿದಾಗ ಚೀನಾ 2–0 ಮುನ್ನಡೆ ಸಾಧಿಸಿತು.

ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ ಬಿ.ಸಾಯಿ ಪ್ರಣೀತ್‌ 10–21, 10–21ರಿಂದ ಆಲ್ ಇಂಗ್ಲೆಂಡ್‌ ಮಾಜಿ ಚಾಂಪಿಯನ್‌ ಶಿ ಯುಕಿ ಎದುರು ಮುಗ್ಗರಿಸಿದರು.

ಔಪಚಾರಿಕ ಎನಿಸಿದ್ದ ಕೊನೆಯ ಎರಡು ಪಂದ್ಯಗಳಲ್ಲಿ, ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ– ಎನ್‌.ಸಿಕ್ಕಿರೆಡ್ಡಿ ಜೋಡಿ 16-21, 13-21ರಿಂದ ಜೆಂಗ್ ಯು– ಲಿ ವೆನ್‌ ಮಿ ಎದುರು, ಮಿಶ್ರ ಡಬಲ್ಸ್ ಜೋಡಿ ಕಿದಂಬಿ ಶ್ರೀಕಾಂತ್‌– ಋತುಪರ್ಣ ಪಂಡಾ 9-21, 9-21ರಿಂದ ಡು ಯು– ಫೆಂಗ್ ಯಾನ್ ಜೆ ಎದುರು ಸೋಲು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.