ಬರ್ಲಿನ್: ಬೆಂಗಳೂರಿನ ಶ್ರೀಹರಿ ನಟರಾಜ್ ಜಾಗತಿಕ ವಿಶ್ವವಿದ್ಯಾಲಯ ಕ್ರೀಡಾಕೂಟದ ಈಜು ವಿಭಾಗದಲ್ಲಿ ದಾಖಲೆಗಳನ್ನು ಬರೆಯುವುದನ್ನು ಮುಂದುವರಿಸಿದ್ದಾರೆ.
ಭಾನುವಾರ ನಡೆದ ಪುರುಷರ 100 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಅವರು 49.46 ಸೆಕೆಂಡುಗಳಲ್ಲಿ ಗುರಿ ಮಟ್ಟಿ, ಸೆಮಿಫೈನಲ್‌ಗೆ ಅರ್ಹತೆ ಗಳಿಸಿದರು. ಇದರೊಂದಿಗೆ ಭಾರತೀಯ ಈಜುಪಟುವೊಬ್ಬರು ದಾಖಲಿಸಿದ ಶ್ರೇಷ್ಠ ಸಮಯವೆಂಬ ಹೆಗ್ಗಳಿಕೆ ಅವರದ್ದಾಯಿತು.
ಗುವಾಂಗ್‌ಝೌ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಶ್ರೀಹರಿ ಅವರು ಇಲ್ಲಿ 2008ರಲ್ಲಿ ವೀರಧವಳ್ ಖಾಡೆ (49.47ಸೆ) ಅವರ ದಾಖಲೆಯನ್ನು ಮೀರಿ ನಿಂತರು. ಸ್ಪರ್ಧೆಯ 6ನೇ ಹೀಟ್ಸ್‌ನಲ್ಲಿ ಅವರು ಈಜಿದರು. ಒಟ್ಟಾರೆ 12ನೇ ಸ್ಥಾನ ಗಳಿಸಿ, ಸೆಮಿಫೈನಲ್ ಪ್ರವೇಶಿಸಿದರು.
ಹೋದ ಶುಕ್ರವಾರ ಅವರು 200 ಮೀ ಫ್ರೀಸ್ಟೈಲ್ ವಿಭಾಗದಲ್ಲಿಯೂ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು.
ಈಜು ಕ್ರೀಡೆಯಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಮಾಡಿದ ದಾಖಲೆಗಳನ್ನು ‘ನ್ಯಾಷನಲ್ ರೆಕಾರ್ಡ್’ ಎಂದು ಪರಿಗಣಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ದಾಖಲಾದ ಸಮಯಗಳನ್ನು ‘ಶ್ರೇಷ್ಠ ಭಾರತೀಯ ದಾಖಲೆ’ ಎಂದೇ ಉಲ್ಲೇಖಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.