ADVERTISEMENT

ಈಜು: ಡ್ರೆಸೆಲ್‌ಗೆ ಮತ್ತೆ 3 ಚಿನ್ನ

ವಿಶ್ವ ಈಜು ಚಾಂಪಿಯನ್‌ಷಿಪ್‌

ಏಜೆನ್ಸೀಸ್
Published 27 ಜುಲೈ 2019, 19:56 IST
Last Updated 27 ಜುಲೈ 2019, 19:56 IST
ಕೆಲೆಬ್‌ ಡ್ರೆಸೆಲ್‌, 4x100 ಮೀ. ಮಿಕ್ಸೆಡ್‌ ಫ್ರೀಸ್ಟೈಲ್‌ ರಿಲೆಯಲ್ಲಿ ಚಿನ್ನ ಗೆದ್ದ ತಂಡದ ಜೊತೆ ಆ
ಕೆಲೆಬ್‌ ಡ್ರೆಸೆಲ್‌, 4x100 ಮೀ. ಮಿಕ್ಸೆಡ್‌ ಫ್ರೀಸ್ಟೈಲ್‌ ರಿಲೆಯಲ್ಲಿ ಚಿನ್ನ ಗೆದ್ದ ತಂಡದ ಜೊತೆ ಆ   

ಗುವಾಂಗ್ಜು, ದಕ್ಷಿಣ ಕೊರಿಯಾ: ಅಮೆರಿಕದ ‘ಗ್ಲಾಮರ್‌ ಬಾಯ್‌’ಕೆಲೆಬ್‌ ಡ್ರೆಸೆಲ್, ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಮತ್ತೆ ಮೂರು ಚಿನ್ನದ ಪದಕಗಳೊಡನೆ ಹ್ಯಾಟ್ರಿಕ್‌ ಸಾಧನೆ ಮೆರೆದರು. ಇದ ರೊಂದಿಗೆ ಈ ಕೂಟದಲ್ಲಿ ಡ್ರೆಸೆಲ್‌ ಗೆದ್ದ ಬಂಗಾರದ ಪದಕಗಳ ಸಂಖ್ಯೆ ಆರಕ್ಕೆ ಏರಿತು. ಈ ಸಾಧನೆಗೆ ಮೊದಲು ಈಜುಕೊಳದ ಹತ್ತಿರ ನೈಟ್‌ ಕ್ಲಬ್‌ನ ಬಾಲ್ಕನಿ ಕುಸಿದು ಇಬ್ಬರು ಮೃತಪಟ್ಟು, ಎಂಟು ಈಜುಪಟುಗಳು ಗಾಯಗೊಂಡಿದ್ದರು.

ಆದರೆ ಡ್ರೆಸೆಲ್‌ ಅವರ ಗಮನ ಕೊಳದಲ್ಲಿ ತಮ್ಮ ಸ್ಪರ್ಧೆಗಳ ಮೇಲೆಯೇ ಇತ್ತು. 50 ಮೀ. ಫ್ರೀಸ್ಟೈಲ್‌, 100 ಮೀಟರ್‌ ಬಟರ್‌ ಫ್ಲೈ ಸ್ಪರ್ಧೆಗಳನ್ನು ಸುಲಭವಾಗಿ ಗೆದ್ದುಕೊಂಡ ಅವರು, ಅಮೆರಿಕದ ಪ್ರಬಲ ತಂಡ4x100 ಮೀಟರ್‌ ಮಿಕ್ಸೆಡ್‌ ಫ್ರೀಸ್ಟೈಲ್‌ ರಿಲೇ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಡನೆ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಡ್ರೆಸೆಲ್ ಜೊತೆ ಜಾಕ್‌ ಆ್ಯಪಲ್‌, ಮೆಲೋರಿ ಕಮರ್‌ಫೋರ್ಡ್‌ ಮತ್ತು ಸಿಮೋನೆ ಮಾನ್ಯುಯೆಲ್‌ ಅವರನ್ನೊಳಗೊಂಡ ತಂಡ ನಿಗದಿತ ದೂರವನ್ನು 3ನಿ.19.40 ಸೆ.ಗಳಲ್ಲಿ ಕ್ರಮಿಸಿತು. ಈ ಹಿಂದಿನ ದಾಖಲೆ (3ನಿ.19.60ಸೆ.) ಅಮೆರಿಕ ತಂಡದ ಹೆಸರಿನಲ್ಲೇ ಇತ್ತು. ಆಸ್ಟ್ರೇಲಿಯಾ ತಂಡ (3ನಿ.19.97 ಸೆ.) ಬೆಳ್ಳಿಯ ಪದಕ ತನ್ನದಾಗಿಸಿಕೊಂಡರೆ, ಫ್ರಾನ್ಸ್‌ ತಂಡ (3ನಿ.22.11ಸೆ) ಕಂಚಿನ ಪದಕ ಪಡೆಯಿತು.

ADVERTISEMENT

50 ಮೀ. ಫ್ರೀಸ್ಟೈಲ್‌ನಲ್ಲಿ ಸ್ಫೋಟಕ ಆರಂಭ ಪಡೆದ ಅವರು ಸುಲಭವಾಗಿ 21.04 ಸೆಕೆಂಡುಗಳಲ್ಲಿ ಗುರಿಮುಟ್ಟಿದರು. ಬ್ರೆಜಿಲ್‌ನ ಬ್ರೂನೊ ಫ್ರೇಟಸ್‌ ಮತ್ತು ಗ್ರೀಸ್‌ನ ಕ್ರಿಸ್ಟಿಯಾನ್‌ ಗೊಲೊಮೀವ್‌ – ಇಬ್ಬರೂ 21.45 ಸೆಕೆಂಡುಗಳಲ್ಲಿ ಗುರಿಮುಟ್ಟಿ ರಜತ ಪದಕ ಹಂಚಿಕೊಂಡರು.

ಸಂಭ್ರಮ ಹಂಚಿಕೊಳ್ಳಲು ಅವರಿಗೆ ಹೆಚ್ಚು ಸಮಯವಿರಲಿಲ್ಲ. ಅಲ್ಪ ಅವಧಿಯಲ್ಲೇ ನಡೆದ 100 ಮೀ. ಬಟರ್‌ಫ್ಲೈನಲ್ಲಿ ಅವರು 49.66 ಸೆ.ಗಳಲ್ಲಿ ಗುರಿಮುಟ್ಟಿದರು. ಶುಕ್ರವಾರ ನಡೆದ ಈ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಅವರು 49.50 ಸೆ.ಗಳಲ್ಲಿ ಗುರಿಮುಟ್ಟಿ ಮೈಕೆಲ್‌ ಫೆಲ್ಪ್ಸ್‌ ಅವರ ದಾಖಲೆ ಮುಳುಗಿಸಿದ್ದರು.

ಎರಡು ವಿಶ್ವ ಈಜು ಚಾಂಪಿಯನ್‌ಷಿಪ್‌ಗಳಲ್ಲಿ ಆರು ಅಥವಾ ಹೆಚ್ಚು ಪದಕ ಗೆದ್ದ ವಿಶ್ವದ ಮೊದಲ ಈಜುಪಟು ಎಂಬ ಶ್ರೇಯ 22 ವರ್ಷದ ಡ್ರೆಸೆಲ್‌ ಅವರದಾಯಿತು. ಬುಡಾಪೆಸ್ಟ್‌ (ಹಂಗೆರಿ)ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಏಳು ಚಿನ್ನದ ಪದಕಗಳ ಒಡೆಯರಾಗಿದ್ದರು.

ಸ್ವೀಡನ್‌ನ ಸಾರಾ ಸ್ಯೋಸ್ಟ್ರಾಮ್‌ 50 ಮೀ. ಬಟರ್‌ಫ್ಲೈ ಸ್ಪರ್ಧೆಯನ್ನು 25.02 ಸೆ.ಗಳಲ್ಲಿ ಪೂರೈಸಿ ವಿಶ್ವ ಕೂಟದಲ್ಲಿ ಮೂರು ಚಿನ್ನ ಗೆದ್ದ ಮೊದಲ ವನಿತೆ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.