ADVERTISEMENT

ಈಜು: ಬೆಂಗಳೂರಿನಲ್ಲಿ ಸುಸಜ್ಜಿತ ಸೌಲಭ್ಯ; ವೈವಿಧ್ಯಮಯ ತರಬೇತಿ

ವಿಕ್ರಂ ಕಾಂತಿಕೆರೆ
Published 5 ಜುಲೈ 2021, 3:50 IST
Last Updated 5 ಜುಲೈ 2021, 3:50 IST
ಜಯನಗರದಲ್ಲಿರುವ ಬಿಬಿಎಂಪಿ ಈಜುಕೊಳ –ಪ್ರಜಾವಾಣಿ ಚಿತ್ರ
ಜಯನಗರದಲ್ಲಿರುವ ಬಿಬಿಎಂಪಿ ಈಜುಕೊಳ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಈಜುಕೇಂದ್ರಗಳ ‍ಪೈಕಿ ಹೆಚ್ಚಿನವುಗಳಲ್ಲಿ ಸಕಲ ಸೌಲಭ್ಯಗಳೂ ಇವೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಂದು ಕೊಳ ಹಾಗೂ ಬಿಬಿಎಂಪಿಯ 12 ಕೊಳಗಳು ಮಾತ್ರವಲ್ಲದೆ ರಾಜ್ಯ ಈಜುಸಂಸ್ಥೆಯ ಮಾನ್ಯತೆ ಪಡೆದಿರುವ 26 ಕ್ಲಬ್‌ಗಳ ಕೊಳಗಳು ಇವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರವಾಗಲಿ ಸ್ಥಳೀಯಾಡಳಿತವಾಗಲಿ ಮಾಡಿರುವ ಸೌಲಭ್ಯಗಳು ಶೂನ್ಯ.

ಪರಿಣಿತ ಕೋಚ್‌ಗಳು, ಅತ್ಯಾಧುನಿಕ ಫಿಟ್‌ನೆಸ್ ಕೇಂದ್ರಗಳು, ವಿಶ್ರಾಂತಿ ತಾಣಗಳು ಮುಂತಾದ ಸೌಲಭ್ಯಗಳಿರುವ ನಗರದ ಈಜುಕೇಂದ್ರಗಳಲ್ಲಿ ಕೋಚಿಂಗ್‌ಗೆ ವೈವಿಧ್ಯಮಯ ಅನುಕೂಲಗಳಿವೆ. ಮುಖ್ಯ ಕೋಚ್‌, ವಯೋಮಾನ ವಿಭಾಗದ ಕೋಚ್ ಸೇರಿದಂತೆ ಪ್ರತಿ ಕೇಂದ್ರಗಳಲ್ಲಿ 10ರಿಂದ 17ರಷ್ಟು ಕೋಚ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಕೋರ್ಸ್‌ಗಳ ವಿನ್ಯಾಸದಲ್ಲೂ ಕ್ಲಬ್‌ಗಳು ವೃತ್ತಿಪರತೆಯನ್ನು ತೋರುತ್ತಿವೆ. ಲಾಂಗ್ ಕೋರ್ಸ್, ಶಾರ್ಟ್ ಕೋರ್ಸ್ ಮತ್ತು ಬೇಬಿ ಪೂಲ್ ಮುಂತಾದ ತರಬೇತಿ ಸೌಲಭ್ಯಗಳು ಕೆಲವು ಕ್ಲಬ್‌ಗಳಲ್ಲಿ ಇವೆ. ಸಿಂಕ್ರನೈಸ್ಡ್‌ ಈಜು ಹೊರತುಪಡಿಸಿದರೆ ಉಳಿದೆಲ್ಲ ಶೈಲಿಯಲ್ಲೂ ತರಬೇತಿ ನೀಡುವಲ್ಲಿ ಬೆಂಗಳೂರು ಮುಂಪಕ್ತಿಯಲ್ಲಿದೆ.

ADVERTISEMENT

ಒಮ್ಮೆ ಈಜುಕೊಳಕ್ಕೆ ಇಳಿದರೆ ಒಲಿಂಪಿಕ್ ಈಜುಪಟುವಾಗುವಷ್ಟರ ಮಟ್ಟಿಗೆ ಅವಕಾಶಗಳು ಇಲ್ಲಿವೆ. ಈ ಎಲ್ಲ ಕಾರಣಗಳಿಂದ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಬೆಂಗಳೂರು ಈಜು ಹಬ್ ಆಗಿದೆ.

ಖಾಸಗಿ ಸಹಭಾಗಿತ್ವ ಪ್ರಗತಿಗೆ ನಾಂದಿ: ಬೆಂಗಳೂರಿನಲ್ಲಿ ಈಜುಕೊಳಗಳ ಸುಸ್ಥಿರ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ ನಾಂದಿಯಾಯಿತು ಎನ್ನುತ್ತಾರೆ ರಾಜ್ಯ ಈಜುಸಂಸ್ಥೆಯ ಅಧ್ಯಕ್ಷ ಗೋಪಾಲ ಹೊಸೂರು.

‘ರಾಜ್ಯದ ಎಲ್ಲ ಕಡೆಗಳಲ್ಲೂ ಈಜುಕೊಳಗಳು ಇವೆ. ಆದರೆ ನಿರ್ವಹಣೆ ಸಮರ್ಪಕವಾಗಿಲ್ಲದ ಕಾರಣ ಅವು ಶೋಚನೀಯ ಸ್ಥಿತಿಯಲ್ಲಿವೆ. ವೃತ್ತಿಪರರ ಕೊರತೆ ಕ್ರೀಡಾ ಇಲಾಖೆಯನ್ನೂ ಸ್ಥಳೀಯಾಡಳಿತ ಸಂಸ್ಥೆಗಳನ್ನೂ ಕಾಡುತ್ತಿದೆ. ಹೀಗಾಗಿ ಈಜು ಕ್ಷೇತ್ರಕ್ಕಾಗಿ ವಿನಿಯೋಗಿಸುವ ಹಣ ಸುಮ್ಮನೇ ಪೋಲಾಗುತ್ತಿದೆ. ಆದ್ದರಿಂದ ನಿರ್ವಹಣೆಯ ಹೊಣೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ಕೊಡುವಂತೆ ಸರ್ಕಾರವನ್ನು ಅನೇಕ ವರ್ಷಗಳಿಂದ ಕೋರುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ಬೆಂಗಳೂರಿನಲ್ಲಿ ಬಿಬಿಎಂಪಿಯ ಎಲ್ಲ ಈಜುಕೊಳಗಳ ನಿರ್ವಹಣೆಯ ಹೊಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ಈ ಕಾರಣದಿಂದ ಅಲ್ಲಿ ಅತ್ಯುತ್ಕೃಷ್ಟ ಗುಣಮಟ್ಟ ಕಾಪಾಡಿಕೊಂಡು ಬರಲಾಗುತ್ತಿದೆ. ಉಳಿದ ಕಡೆಗಳಲ್ಲೂ ಈ ಮಾದರಿ ಅನುಸರಿಸಿದರೆ ಗುಣಮಟ್ಟದ ಕೋಚ್‌ಗಳನ್ನು ಒದಗಿಸಲು ರಾಜ್ಯ ಸಂಸ್ಥೆ ಸಿದ್ಧವಿದೆ’ ಎಂದು ಅವರು ವಿವರಿಸಿದರು.

* ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ರಾಜ್ಯದಲ್ಲಿ 28 ಈಜುಕೊಳಗಳು ಇವೆ. ಬೆಂಗಳೂರು ನಗರ ಜಿಲ್ಲೆಯ ಈಜುಕೊಳದ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿಕೊಡಲಾಗಿದೆ. ಉಳಿದ ಕಡೆಗಳಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆಗೆ ಚಿಂತನೆ ನಡೆದಿದೆ. ಮೈಸೂರು ಮತ್ತು ರಾಮನಗರದಲ್ಲಿ ಮೊದಲ ಹಂತದ ಪ್ರಯೋಗ ನಡೆದಿದೆ‌. ಅಲ್ಲಿ ಜಿಲ್ಲಾ ಕ್ರೀಡಾಂಗಣ ಸಮಿತಿಯವರು ನಿರ್ವಹಣೆ ಮಾಡುತ್ತಿದ್ದಾರೆ.

–ರಮೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕರು

28 ರಾಜ್ಯದಲ್ಲಿರುವ ಡಿವೈಇಎಸ್ ಈಜುಕೊಳಗಳು
12 ಬೆಂಗಳೂರಿನಲ್ಲಿರುವ ಪಾಲಿಕೆ ಈಜುಕೊಳಗಳು
1 ಬೆಂಗಳೂರಿನಲ್ಲಿರುವ ಡಿವೈಇಎಸ್ ಕೊಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.