ADVERTISEMENT

ಸಿಂಧು, ಶ್ರೀಕಾಂತ್‌ ಮೇಲೆ ನಿರೀಕ್ಷೆ

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌: ಹಿಂದೆ ಸರಿದ ಲಕ್ಷ್ಯ ಸೇನ್‌

ಪಿಟಿಐ
Published 21 ಮಾರ್ಚ್ 2022, 12:54 IST
Last Updated 21 ಮಾರ್ಚ್ 2022, 12:54 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಬಾಸೆಲ್‌: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ.ಸಿಂಧು ಮತ್ತು ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಕಿದಂಬಿ ಶ್ರೀಕಾಂತ್‌ ಅವರು ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನ ಭರವಸೆ ಎನಿಸಿದ್ದಾರೆ.

ಮಂಗಳವಾರ ಇಲ್ಲಿ ಟೂರ್ನಿ ಆರಂಭವಾಗುತ್ತಿದ್ದು, ಸತತ ಎರಡು ಚಾಂಪಿಯನ್‌ಷಿಪ್‌ಗಳಲ್ಲಿ ಆಡಿರುವ ಲಕ್ಷ ಸೇನ್ ಅವರು ದಣಿವಿನ ಕಾರಣ ಕಣಕ್ಕಿಳಿಯುತ್ತಿಲ್ಲ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಆಲ್ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಲಕ್ಷ್ಯ ರನ್ನರ್‌ಅಪ್ ಅಗಿದ್ದರು. ಕ್ವಾರ್ಟರ್‌ಫೈನಲ್ ತಲುಪಲು ವಿಫಲರಾಗಿದ್ದ ಸಿಂಧು, ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್‌ ಇಲ್ಲಿ ಉತ್ತಮ ಸಾಧನೆ ತೋರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ADVERTISEMENT

2019ರ ವಿಶ್ವ ಚಾಂಪಿಯನ್‌ ಸಿಂಧು ಇಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದು, ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್‌ನ ಹೊಜ್‌ಮಾರ್ಕ್‌ ಜಾರ್ಸ್‌ಫೆಲ್ಟ್‌ ಅವರನ್ನು ಎದುರಿಸುವರು. ಸೈನಾ ಅವರಿಗೆ ಚೀನಾದ ವಾಂಗ್‌ ಜಿ ಯಿ ಸವಾಲು ಎದುರಾಗಿದೆ.

ಹುವೆಲ್ವಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಉತ್ತಮ ಲಯದಲ್ಲಿರುವ ಶ್ರೀಕಾಂತ್, ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಅರ್ಹತಾ ಸುತ್ತಿನಿಂದ ಗೆದ್ದುಬಂದ ಆಟಗಾರನನ್ನು ಎದುರಿಸುವರು. ಬಿ. ಸಾಯಿ ಪ್ರಣೀತ್ ಅವರು ಭಾರತದವರೇ ಆದ ಎಚ್‌.ಎಸ್‌.ಪ‍್ರಣಯ್‌ ವಿರುದ್ಧ ಆಡುವರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ, ಇಂಡೊನೇಷ್ಯಾದ ಮುಹಮ್ಮದ್‌ ಶೋಹಿಬುಲ್‌ ಫಿಕ್ರಿ ಮತ್ತು ಬಾಗಸ್ ಮೌಲಾನ ಎದುರು ಕಣಕ್ಕಿಳಿಯುವರು.

ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದ ತ್ರಿಶಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿಯು ಇಲ್ಲಿಯೂ ಉತ್ತಮ ಸಾಮರ್ಥ್ಯ ತೋರುವ ಉತ್ಸಾಹದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ಥಾಯ್ಲೆಂಡ್‌ನ ಜಾಂಗ್‌ಕೊಲ್ಪನ್‌ ಕಿತಿತಾರಕುಲ್‌– ರವಿಂದಾ ಪ್ರಜೊಂಗ್‌ಜಾಯ್‌ ಸವಾಲು ಎದುರಾಗಿದೆ.

ಕಣದಲ್ಲಿರುವ ಭಾರತದ ಆಟಗಾರರು/ಆಟಗಾರ್ತಿಯರು

ಪುರುಷರ ಸಿಂಗಲ್ಸ್: ಕಿದಂಬಿ ಶ್ರೀಕಾಂತ್‌, ಬಿ.ಸಾಯಿ ಪ್ರಣೀತ್‌, ಎಚ್‌.ಎಸ್.ಪ್ರಣಯ್‌, ಸಮೀರ್ ವರ್ಮಾ, ಪರುಪಳ್ಳಿ ಕಶ್ಯಪ್.

ಮಹಿಳಾ ಸಿಂಗಲ್ಸ್: ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಆಕರ್ಷಿ ಕಶ್ಯಪ್‌.

ಪುರುಷರ ಡಬಲ್ಸ್: ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ–ಚಿರಾಗ್‌ಶೆಟ್ಟಿ, ಕೃಷ್ಣಪ್ರಸಾದ್‌ ಗರಗ–ವಿಷ್ಣುವರ್ಧನ ಗೌಡ್‌, ಧ್ರುವ ಕಪಿಲ– ಎಂ.ಆರ್‌.ಅರ್ಜುನ್‌.

ಮಹಿಳಾ ಡಬಲ್ಸ್: ಅಶ್ವಿನಿ ಪೊನ್ನಪ್ಪ–ಸಿಕ್ಕಿ ರೆಡ್ಡಿ, ತ್ರಿಶಾ ಜೋಲಿ–ಗಾಯತ್ರಿ ಗೋಪಿಚಂದ್‌.

ಮಿಶ್ರ ಡಬಲ್ಸ್: ವೆಂಕಟ ಗೌರವ್ ಪ್ರಸಾದ್‌–ಜೂಹಿ ದೇವಾಂಗನ್‌, ಇಶಾನ್ ಭಟ್ನಾಗರ್‌–ತನಿಶಾ ಕ್ರಾಸ್ಟೊ.

ಪ್ರಶಸ್ತಿ ವಿಜೇತ ಭಾರತೀಯರು

ಪುರುಷರ ಸಿಂಗಲ್ಸ್

ಆಟಗಾರ;ವರ್ಷ

ಕಿದಂಬಿ ಶ್ರೀಕಾಂತ್‌;2015

ಎಚ್‌.ಎಸ್‌.ಪ್ರಣಯ್‌;2016

ಸಮೀರ್ ವರ್ಮಾ;2018

ಮಹಿಳಾ ಸಿಂಗಲ್ಸ್

ಸೈನಾ ನೆಹ್ವಾಲ್‌;2011 ಮತ್ತು 2012

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.