ಮಲೇಷ್ಯಾದ ಶೋಲೆ ಐದಿಲ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ ಸೇನ್ ಷಟ್ಲ್ ಹಿಂತಿರುಗಿಸಲು ಮುಂದಾದರು.
ಪಿಟಿಐ ಚಿತ್ರ
ಲಖನೌ: ಅಗ್ರ ಶ್ರೇಯಾಂಕದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಬುಧವಾರ ನೇರ ಗೇಮ್‌ಗಳ ಗೆಲುವಿನೊಡನೆ, ಸೈಯದ್ ಮೋದಿ ಅಂತರರಾಷ್ಟ್ರೀಯ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ಎರಡನೇ ಸುತ್ತನ್ನು ತಲುಪಿದರು.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಮೊದಲ ಸುತ್ತಿನ್ಲಿ 21–17, 21–15 ರಿಂದ ಸ್ವದೇಶದ ಉದಯೋನ್ಮುಖ ಆಟಗಾರ್ತಿ ಅನ್ಮೋಲ್ ಖಾರ್ಬ್ ಅವರನ್ನು ಸೋಲಿಸಿದರು.
2021ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಪುರುಷರ ಸಿಂಗಲ್ಸ್‌ನಲ್ಲಿ 21–12, 21–12ರಲ್ಲಿ ಮಲೇಷ್ಯಾದ ಕ್ವಾಲಿಫೈಯರ್ ಶೋಲೇ ಐದಿಲ್ ಅವರನ್ನು ಹಿಮ್ಮೆಟ್ಟಿಸಿದರು.
ಸಿಂಧು ಎರಡನೇ ಸುತ್ತಿನಲ್ಲಿ ಸ್ವದೇಶದವರೇ ಆದ ಇರಾ ಶರ್ಮ ಅವರನ್ನು ಎದುರಿಸಲಿದ್ದಾರೆ. ಇರಾ ಇನ್ನೊಂದು ಪಂದ್ಯದಲ್ಲಿ 21–13, 21–19 ರಿಂದ ದೀಪ್ಶಿಕಾ ಸಿಂಗ್ ಅವರನ್ನು ಮಣಿಸಿದರು. ಲಕ್ಷ್ಯ ಎರಡನೆ ಸುತ್ತಿನಲ್ಲಿ ರವಿ ಅಥವಾ ಇಸ್ರೇಲ್‌ನ ಡೇನಿಯಲ್ ಡುಬೊವೆಂಕೊ ಅವರನ್ನು ಎದುರಿಸಲಿದ್ದಾರೆ.
‘ಎರಡು ವರ್ಷಗಳ ನಂತರ ಇಲ್ಲಿ ಆಡುತ್ತಿರುವುದು ಸಂತಸ ತಂದಿದೆ. ಗಾಯಾಳಾಗಿದ್ದ ಕಾರಣ ಕಳೆದ ವರ್ಷ ಆಡಿರಲಿಲ್ಲ’ ಎಂದು ಸಿಂಧು ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು.
‘ಅನ್ಮೋಲ್ ವಿರುದ್ಧ ಮೊದಲ ಬಾರಿ ಆಡಿದ್ದೆ. ಅವಳು ಚೆನ್ನಾಗಿ ಆಡಿದಳು. ಈ ಹಿಂದೆ ಏಷ್ಯನ್ ಚಾಂಪಿಯನ್‌ಷಿಪ್ಸ್‌ನಲ್ಲಿ ನಾವು ಜೊತೆಯಾಗಿ ಆಡಿದ್ದೆವು. ಇದು ನನ್ನ ಮೊದಲ ಪಂದ್ಯ. ಹೀಗಾಗಿ ಕೆಲವು ತಪ್ಪುಗಳಾದವು. ಒಟ್ಟಾರೆ ನನ್ನ ಆಟ ಸಂತೃಪ್ತಿ ನೀಡಿದೆ’ ಎಂದು ಹೇಳಿದರು.
ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಶ್ರೇಯಾಂಕದ ಕಿರಣ್ ಜಾರ್ಜ್, ಎಂಟನೇ ಶ್ರೇಯಾಂಕದ ಆಯುಷ್ ಶೆಟ್ಟಿ ಮತ್ತು ಮೀರಬಾ ಲುವಾಂಗ್ ಮೈಸ್ನಮ್ ಅವರೂ ಎರಡನೇ ಸುತ್ತು ತಲುಪಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕದ ಮಾಳವಿಕಾ ಬನ್ಸೋಡ್, ಐದನೇ ಶ್ರೇಯಾಂಕದ ಅನುಪಮಾ ಉಪಾಧ್ಯಾಯ, ಇಶಾರಾಣಿ ಬರೂವಾ, ದೇವಿಕಾ ಸಿಹಾಗ್, ಉನ್ನತಿ ಹೂಡ ಮತ್ತು ಶ್ರೀಯಾಂಶಿ ವಲಿಶೆಟ್ಟಿ ಅವರೂ ಮುನ್ನಡೆದರು.
ಮಾಳವಿಕಾ 21–16, 21–17 ರಿಂದ ವಿಕ್ಟೋರಿಯಾ ದಾಬ್ಸಿನ್‌ಸ್ಕಾ ಅವರನ್ನು, ಅನುಪಮಾ 19–21, 22–20, 21–15 ರಿಂದ ಅಜರ್‌ಬೈಜಾನ್‌ನ ಕೀಶಾ ಫಾತಿಮಾ ಅಝಾರಾ ಅವರನ್ನು, ಉನ್ನತಿ 21–12, 21–16 ರಿಂದ ಥಾಯ್ಲೆಂಡ್‌ನ ಥಮೋನ್ವಾನ್ ನಿಥಿಟ್ಟಿಕ್ರೈ ಅವರನ್ನು ಪರಾಭವಗೊಳಿಸಿದರು.
ಪುರುಷರ ವಿಭಾಗ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಕಿರಣ್ ಜಾರ್ಜ್ 21–12, 23–21ರಲ್ಲಿ ಅಲಾಪ್ ಮಿಶ್ರಾ ಅವರನ್ನು, ಆಯುಷ್ ಶೆಟ್ಟಿ 21–18, 15–21, 21–16 ರಿಂದ ರಘು ಮರಿಸ್ವಾಮಿ ಅವರನ್ನು, ಮೀರಬಾ ಲುವಾಂಗ್ ಮೈಸ್ನಮ್ 14–21, 21–19, 21–10 ರಿಂದ ಥಾಯ್ಲೆಂಡ್‌ನ ಸರನ್ ಜಮ್‌ಸ್ರಿ ಅವರನ್ನು ಸೋಲಿಸಿದರು.
ಲಕ್ಷ್ಯ ಸೇನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.