ADVERTISEMENT

ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪ್ರಶಸ್ತಿ ಸುತ್ತಿಗೆ ತನ್ವಿ ಲಗ್ಗೆ

ಪಿಟಿಐ
Published 18 ಅಕ್ಟೋಬರ್ 2025, 16:02 IST
Last Updated 18 ಅಕ್ಟೋಬರ್ 2025, 16:02 IST
<div class="paragraphs"><p>ಭಾರತದ ತನ್ವಿ ಶರ್ಮಾ</p></div>

ಭಾರತದ ತನ್ವಿ ಶರ್ಮಾ

   

–ಪಿಟಿಐ ಚಿತ್ರ

ಗುವಾಹಟಿ: ಭಾರತದ ಉದಯೋನ್ಮುಖ ಆಟಗಾರ್ತಿ ತನ್ವಿ ಶರ್ಮಾ ಅವರು ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಪ್ರಶಸ್ತಿ ಸುತ್ತು ಪ್ರವೇಶಿಸಿದರು. ಅದರೊಂದಿಗೆ, ಟೂರ್ನಿಯ ಇತಿಹಾಸದಲ್ಲಿ ಫೈನಲ್‌ ತಲು‍ಪಿದ ಭಾರತದ ಮೂರನೇ ಆಟಗಾರ್ತಿ ಎಂಬ ಗೌರವ ಅವರದಾಯಿತು. 

ADVERTISEMENT

ಅಗ್ರ ಶ್ರೇಯಾಂಕದ ತನ್ವಿ, ನಾಲ್ಕರ ಘಟ್ಟದ ಪಂದ್ಯದಲ್ಲಿ 15–11, 15–9ರಿಂದ ನೇರ ಗೇಮ್‌ಗಳಿಂದ ಚೀನಾದ ಲಿಯೊ ಸಿ ಯಾ ಅವರನ್ನು ಮಣಿಸಿದರು.

ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ತನ್ವಿ ಮೊದಲ ಗೇಮ್‌ ಅನ್ನು 13 ನಿಮಿಷಗಳಲ್ಲಿ  ಗೆದ್ದುಕೊಂಡರು. ಒಂದು ಹಂತದಲ್ಲಿ 7–3ರಿಂದ ಮುನ್ನಡೆಯಲ್ಲಿದ್ದ ತನ್ವಿಗೆ ಚೀನಾ ಆಟಗಾರ್ತಿ ಕೊಂಚ ಪ್ರತಿರೋಧ ತೋರಿದರು. ಹಿನ್ನಡೆಯನ್ನು 7–8ಕ್ಕೆ ಇಳಿಸಿಕೊಂಡರು. ಆದರೆ ತನ್ವಿ ಅವರು ಕ್ರಾಸ್ ಕೋರ್ಟ್ ಸ್ಲೈಸ್ ಹಿಟ್‌ಗಳ ಮೂಲಕ ಎದುರಾಳಿಯ ಸವಾಲನ್ನು ಮೆಟ್ಟಿನಿಂತರು. ಎರಡನೇ ಗೇಮ್‌ನಲ್ಲಿ ಎದುರಾಳಿ ಆಟಗಾರ್ತಿಗೆ ಲಯ ಕಂಡುಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.

ಫೈನಲ್‌ನಲ್ಲಿ ತನ್ವಿ ಅವರು ಎರಡನೇ ಶ್ರೇಯಾಂಕದ ಅನ್ಯಪತ್ ಫಿಚಿಟ್‌ಪ್ರೀಚಸಕ್‌ (ಥಾಯ್ಲೆಂಡ್‌) ಅವರನ್ನು ಎದುರಿಸಲಿದ್ದಾರೆ. ಅನ್ಯಪತ್‌, ಸೆಮಿಫೈನಲ್‌ನಲ್ಲಿ ಸ್ವದೇಶದ ಯತವೀಮಿನ್‌ ಕೆತ್‌ಲಿಯೆಂಗ್‌ ಅವರನ್ನು 10–15, 15–11, 15–5ರಿಂದ ಪರಾಭವಗೊಳಿಸಿದರು.

ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್‌ (2006 ಹಾಗೂ 2008) ಹಾಗೂ ಅಪರ್ಣಾ ಪೋಪಟ್‌ (1996) ಅವರು ಈ ಹಿಂದೆ ಈ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದರು.

ಭಾರತದ ತನ್ವಿ ಶರ್ಮಾ ಅವರ ಆಟದ ವೈಖರಿ –ಚಿತ್ರ: ‘ಬ್ಯಾಡ್ಮಿಂಟನ್‌ ಫೋಟೊ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.