ಸೋಲೊ (ಇಂಡೊನೇಷ್ಯಾ): ಭಾರತದ ಯುವ ಆಟಗಾರ್ತಿಯರಾದ ತನ್ವಿ ಶರ್ಮಾ ಮತ್ತು ವೆನ್ನಲ ಕಲಗೊಟ್ಲ ಅವರು ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್‌ಷಿಪ್‌ನ ಬಾಲಕಿಯರ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದರು.
ಎರಡನೇ ಶ್ರೇಯಾಂಕದ ತನ್ವಿ ಶುಕ್ರವಾರ 21-19, 21-14ರಿಂದ ಐದನೇ ಶ್ರೇಯಾಂಕದ ಥಲಿತಾ ರಾಮಧಾನಿ ಅವರನ್ನು ಹಿಮ್ಮೆಟ್ಟಿಸಿದರು. 16ನೇ ವರ್ಷದ ತನ್ವಿ, ಇಂಡೊನೇಷ್ಯಾ ಆಟಗಾರ್ತಿಯನ್ನು ಮಣಿಸಲು 35 ನಿಮಿಷ ತೆಗೆದುಕೊಂಡರು.
ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡುತ್ತಿರುವ ತನ್ವಿ, ಈತನಕದ ಎಲ್ಲ ಪಂದ್ಯಗಳನ್ನು ನೇರ ಗೇಮ್‌ಗಳಿಂದ ಗೆದ್ದಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ಎಂಟನೇ ಶ್ರೇಯಾಂಕದ ಯಿನ್ ಯಿ ಕ್ವಿಂಗ್ (ಚೀನಾ) ಅವರನ್ನು ಎದುರಿಸಲಿದ್ದಾರೆ.
ವೆನ್ನಲ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ 21-18, 17-21, 21-17ರಿಂದ ಥಾಯ್ಲೆಂಡ್‌ನ ಜನ್ಯಪಾರ್ನ್ ಮೀಪಂಥಾಂಗ್ ವಿರುದ್ಧ ಗೆಲುವು ಸಾಧಿಸಿದರು. ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ ಚೀನಾದ ಲಿಯು ಸಿ ಯಾ ವಿರುದ್ಧ ಸೆಣಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.