ADVERTISEMENT

ಟಾಟಾ ಸ್ಟೀಲ್ ಮಾಸ್ಟರ್ಸ್ 4ನೇ ಸುತ್ತು: ಗುಕೇಶ್–ಪ್ರಜ್ಞಾನಂದ ಪಂದ್ಯ ಡ್ರಾ

ಪಿಟಿಐ
Published 21 ಜನವರಿ 2026, 13:40 IST
Last Updated 21 ಜನವರಿ 2026, 13:40 IST
<div class="paragraphs"><p>ಪ್ರಜ್ಞಾನಂದ. ಪಂದ್ಯ ‘ಡ್ರಾ’ ಆಯಿತು. </p></div>

ಪ್ರಜ್ಞಾನಂದ. ಪಂದ್ಯ ‘ಡ್ರಾ’ ಆಯಿತು.

   

ಪಿಟಿಐ

ವಿಯ್ಕ್‌ ಆನ್‌ ಝೀ: ವಿಶ್ವ ಚಾಂಪಿಯನ್‌, ಭಾರತದ ಡಿ.ಗುಕೇಶ್‌ ಅವರು ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಮಂಗಳವಾರ ಸ್ವದೇಶದ ಆರ್‌.ಪ್ರಜ್ಞಾನಂದ ಅವರ ಜೊತೆ ಡ್ರಾ ಮಾಡಿಕೊಂಡರು. ಇದು ಗುಕೇಶ್ ಅವರಿಗೆ ಸತತ ನಾಲ್ಕನೇ ಡ್ರಾ.

ADVERTISEMENT

ಭಾರತದ ಅಗ್ರ ಆಟಗಾರ ಅರ್ಜುನ್ ಇರಿಗೇಶಿ (2.5 ಅಂಕ) ಇನ್ನೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಗ್ರ್ಯಾಂಡ್‌ಮಾಸ್ಟರ್ ಅನೀಶ್‌ ಗಿರಿ (1 ಅಂಕ) ಅವರ ರಕ್ಷಣಾಕೋಟೆ ಭೇದಿಸಲು ವಿಫಲರಾಗಿ ಅರ್ಧ ಪಾಯಿಂಟ್‌ಗೆ ತೃಪ್ತರಾಗಬೇಕಾಯಿತು.

ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ ಮತ್ತು ಅಮೆರಿಕದ ಹ್ಯಾನ್ಸ್ ಮೋಕ್ ನೀಮನ್ ತಲಾ ಮೂರು ಅಂಕ ಗಳಿಸಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಗುಕೇಶ್ ಎರಡು ಪಾಯಿಂಟ್ಸ್‌ ಗಳಿಸಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಪ್ರಜ್ಞಾನಂದ (1 ಅಂಕ) ನಂತರ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಪ್ರಜ್ಞಾನಂದ, ಎದುರಾಳಿಯ ಪಾನ್‌ (ಕಾಲಾಳುಗಳ) ಸಂರಚನೆಯನ್ನು ಮುರಿದರೂ, ಅದರಿಂದ ಹೆಚ್ಚೇನೂ ಪ್ರಯೋಜನವಾಗಲಿಲ್ಲ. ಪಂದ್ಯ ‘ಕ್ವೀನ್‌–ಪಾನ್‌’ ಎಂಡ್‌ಗೇಮ್‌ಗೆ ಪರಿವರ್ತನೆಗೊಂಡು ಡ್ರಾ ಆಯಿತು.

ಕಣದಲ್ಲಿರುವ ಭಾರತದ ನಾಲ್ಕನೇ ಆಟಗಾರ ಅರವಿಂದ ಚಿದಂಬರಮ್ ಮೊದಲ ಸೋಲು ಕಂಡರು. ಮೊದಲ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ಅವರು ಅಮೆರಿಕದ ಹ್ಯಾನ್ಸ್‌ ಮೋಕ್ ನೀಮನ್ (3) ಅವರಿಗೆ ಮಣಿದರು.

ಅಬ್ದುಸತ್ತಾರೋವ್ (3) ಅವರು ಇನ್ನೊಂದು ಪಂದ್ಯದಲ್ಲಿ ಝೆಕ್ ರಿಪಬ್ಲಿಕ್‌ನ ಥಾಯ್ ದೈ ವಾನ್‌ ನುಯೆನ್ (1.5) ಅವರನ್ನು ಸೋಲಿಸಿದರು.

‌ಇತರ ಪಂದ್ಯಗಳಲ್ಲಿ ಜರ್ಮನಿಯ ಮಥಾಯಸ್‌ ಬ್ಲೂಬಮ್ (2) ಅವರು ವಿಶ್ವಕಪ್ ವಿಜೇತ ಜಾವೊಖಿರ್ ಸಿಂದರೋವ್ (2.5) ಅವರಿಗೆ ಮಣಿದರೆ, ವ್ಲಾದಿಮಿರ್ ಫೆಡೊಸೀವ್ (2) ಮತ್ತು ಜೋರ್ಡನ್ ವಾನ್ ಫೊರೀಸ್ಟ್‌ (2.5) ನಡುವಣ ಹಣಾಹಣಿ ಡ್ರಾ ಆಯಿತು. ಟರ್ಕಿಯ ಯಾಗಿಝ್ ಕಾನ್ ಎರ್ಡೊಗ್ಮಸ್ (2) ಮತ್ತು ಜರ್ಮನಿಯ ವಿನ್ಸೆಂಟ್ ಕೀಮರ್ (1.5) ಸಹ ಪಾಯಿಂಟ್‌ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.