ADVERTISEMENT

ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್‌: ಗುಕೇಶ್‌ಗೆ ಹಿನ್ನಡೆ

ಪಿಟಿಐ
Published 31 ಜನವರಿ 2026, 16:00 IST
Last Updated 31 ಜನವರಿ 2026, 16:00 IST
<div class="paragraphs"><p>ಗುಕೇಶ್‌</p></div>

ಗುಕೇಶ್‌

   

(ಪಿಟಿಐ ಚಿತ್ರ)

ವಿಯ್ಕ್‌ ಆನ್‌ ಝೀ (ನೆದರ್ಲೆಂಡ್ಸ್‌), (ಪಿಟಿಐ): ಡಿ.ಗುಕೇಶ್ ಅವರು ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್‌ ಟೂರ್ನಿಯಲ್ಲಿ ಶನಿವಾರ ಸ್ವದೇಶದ ಅರವಿಂದ ಚಿದಂಬರಮ್ ಜೊತೆ ಡ್ರಾ ಮಾಡಿಕೊಂಡರು. ಇದರಿಂದ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಅವರ ಆಸೆ ಭಗ್ನಗೊಂಡಿತು.

ADVERTISEMENT

11ನೇ ಸುತ್ತು ಭಾರತದ ಆಟಗಾರರಿಗೆ ಶುಭದಾಯಕವಾಗಲಿಲ್ಲ. ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದಿರುವ ಆರ್.ಪ್ರಜ್ಞಾನಂದ (4.5 ಅಂಕ) ಅವರು ಉತ್ತಮ ಓಟ ಕಾಣುತ್ತಿರುವ ಜರ್ಮನಿಯ ವಿನ್ಸೆಂಟ್ ಕೀಮರ್ (6) ಅವರಿಗೆ ಮಣಿದರು. ಭಾರತದ ಅಗ್ರಮಾನ್ಯ ಆಟಗಾರ ಅರ್ಜುನ್ ಇರಿಗೇಶಿ (4) ಅವರು ವಿಶ್ವಕಪ್ ವಿಜೇತ ಜಾವೊಖಿರ್ ಸಿಂದರೋವ್ (7) ಅವರೆದುರು ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

ಇನ್ನು ಎರಡು ಸುತ್ತುಗಳು ಉಳಿದಿದ್ದು ಗುಕೇಶ್ 5.5 ಅಂಕ ಸಂಗ್ರಹಿಸಿ 10ನೇ ಸ್ಥಾನದಲ್ಲಿದ್ದಾರೆ. 14 ಆಟಗಾರರ ಕಣದಲ್ಲಿ ಚಿದಂಬರಂ (4) ಅವರು 12ನೇ ಸ್ಥಾನದಲ್ಲಿದ್ದಾರೆ.

ಸಿಂದರೋವ್ ಮತ್ತು ನಾದಿರ್ಬೆಕ್ ಅಬ್ದುಯಸತ್ತಾರೋವ್ ಅವರು ವರ್ಷದ ಈ ಮೊದಲ ಸೂಪರ್ ಟೂರ್ನಿಯಲ್ಲಿ ತಲಾ 7 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಅಬ್ದುಸತ್ತಾರೋವ್ ಅವರು ಇನ್ನೊಂದು ಪಂದ್ಯದಲ್ಲಿ ಆತಿಥೇಯ ಡಚ್‌ ಜಿಎಂ ಜೋರ್ಡನ್ ವಾನ್ ಫಾರಿಸ್ಟ್ ಜೊತೆ ಡ್ರಾ ಮಾಡಿಕೊಂಡರು.

ಗುಕೇಶ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಹ್ಯಾನ್ಸ್ ನೀಮನ್ (6.5) ಅವರನ್ನು ಎದುರಿಸಲಿದ್ದಾರೆ. ಸ್ಲೊವೇನಿಯಾದ ವ್ಲಾದಿಮಿರ್ ಫೆಡೊಸೀವ್ (5.5) ಅವರು ಜರ್ಮನಿಯ ಮಥಾಯಸ್ ಬ್ಲೂಬಾಮ್ ಜೊತೆ ಡ್ರಾ ಮಾಡಿಕೊಂಡರು. ನೆದರ್ಲೆಂಡ್ಸ್‌ನ ಅನಿಶ್ ಗಿರಿ (5.5), ಟರ್ಕಿಯ ಯಾಗಿಝ್ ಕಾನ್ ಎರ್ಡೊಗ್ಮಸ್ ಅವರನ್ನು, ನೀಮನ್, ಝೆಕ್‌ ರಿಪಬ್ಲಿಕ್‌ನ ಥಾಯ್‌ ದೈವಾನ್ ನೂಯೆನ್ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.