ADVERTISEMENT

ಸೂಪರ್‌ ಸ್ಟಾರ್‌ ಪಟ್ಟಕ್ಕೆ ಸಮ್ಮರ್‌ ಮೆಕಿಂಟೋಷ್‌

ಏಜೆನ್ಸೀಸ್
Published 30 ಜುಲೈ 2024, 14:47 IST
Last Updated 30 ಜುಲೈ 2024, 14:47 IST
<div class="paragraphs"><p>ಮಹಿಳೆಯರ 400 ಮೀ. ವೈಯಕ್ತಿಕ ಮೆಡ್ಲೆ ಗೆದ್ದ ಸಂಭ್ರಮದಲ್ಲಿ ಕೆನಡಾದ ಸಮ್ಮರ್‌ ಮೆಕಿಂಟೋಷ್‌ </p></div>

ಮಹಿಳೆಯರ 400 ಮೀ. ವೈಯಕ್ತಿಕ ಮೆಡ್ಲೆ ಗೆದ್ದ ಸಂಭ್ರಮದಲ್ಲಿ ಕೆನಡಾದ ಸಮ್ಮರ್‌ ಮೆಕಿಂಟೋಷ್‌

   

ಪ್ಯಾರಿಸ್‌: ಭವಿಷ್ಯದ ಈಜು ಸೂಪರ್‌ಸ್ಟಾರ್‌ ಎಂಬ ಪ್ರಭಾವಳಿಗೆ ಯೋಗ್ಯವೆನಿಸುವಂತೆ ಕೆನಡಾದ ಹದಿಹರೆಯದ ಈಜುಗಾರ್ತಿ ಸಮ್ಮರ್‌ ಮೆಕಿಂಟೋಷ್‌ ಪ್ಯಾರಿಸ್‌ ಒಲಿಂಪಿಕ್‌ ಕ್ರೀಡೆಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈಗ ಎಲ್ಲರ ಬಾಯಿಯಲ್ಲಿ ಈಕೆಯ ಬಗ್ಗೆ ಮೆಚ್ಚುಗೆಯ ನುಡಿಗಳೇ.

ಬರೇ 17 ವರ್ಷ ವಯಸ್ಸಿನ ಸಮ್ಮರ್‌ ಅವರು ಒಲಿಂಪಿಕ್ಸ್‌ನಂಥ ಅತೀವ ಒತ್ತಡದ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪದಕವನ್ನಾಗಿ ಪರಿವರ್ತಿಸಬಲ್ಲರೇ ಎಂಬ ಚರ್ಚೆ ಕಳೆದ ಹಲವು ತಿಂಗಳಿಂದ ನಡೆಯುತ್ತ ಬಂದಿತ್ತು. ಈಗ ಅದಕ್ಕೆಲ್ಲಾ ಅವರು ಸೂಕ್ತ ರೀತಿಯಲ್ಲೇ ಉತ್ತರ ನೀಡಿದ್ದಾರೆ.

ADVERTISEMENT

ಮೆಕಿಂಟೋಷ್‌, ಲಾ ಡಿಫೆನ್ಸ್‌ ಅರೇನಾದಲ್ಲಿ ಸೋಮವಾರ 15 ಸಹಸ್ರ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ 400 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯನ್ನು 4ನಿ.27.71 ಸೆ.ಗಳಲ್ಲಿ ಪೂರೈಸಿ ಸ್ವರ್ಣ ಗೆದ್ದಿದ್ದಾರೆ. ಅದೂ ಎರಡನೇ ಸ್ಥಾನ ಪಡೆದ ಸ್ಪರ್ಧಿಗಿಂತ ಆರು ಸೆಕೆಂಡು ಮೊದಲಿಗರಾಗಿ ಗುರಿಮುಟ್ಟಿದ್ದಾರೆ.

ಈಜು ಸ್ಪರ್ಧೆಗಳ ಮೊದಲ ದಿನ ತೀವ್ರ ಪೈಪೋಟಿ ಕಂಡ 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಗೆದ್ದರೂ, ಅಮೆರಿಕದ ಮಹಾನ್ ತಾರೆ ಕೇಟಿ ಲಿಡೆಕಿ ಅವರನ್ನು ಹಿಂದೆತಳ್ಳಿದ್ದು ಕಡಿಮೆ ಸಾಧನೆಯಾಗಿರಲಿಲ್ಲ. ಆಸ್ಟ್ರೇಲಿಯಾದ ಈಜುತಾರೆ ಏರಿಯಾರ್ನ್ ಟಿಟ್ಮಸ್‌ ಮಾತ್ರ ಅವರಿಂತ ಮುಂದಿದ್ದರು. 2019ರಿಂದ ಟಿಟ್ಮಸ್‌ ಈ ಸ್ಪರ್ಧೆಯಲ್ಲಿ ‌ಸೋತೇ ಇಲ್ಲ.

ಮೆಕಿಂಟೋಷ್‌ಗೆ ಇನ್ನಷ್ಟು ಚಿನ್ನ ಗೆಲ್ಲುವ ಅವಕಾಶಗಳಿವೆ. ಅವರ ನೆಚ್ಚಿನ ಸ್ಪರ್ಧೆ 200 ಮೀ. ವೈಯಕ್ತಿಕ ಮೆಡ್ಲೆ ನಡೆಯಬೇಕಿದೆ. 200 ಮೀ. ಬಟರ್‌ಫ್ಲೈ ಸ್ಪರ್ಧೆಯ ಚಿನ್ನಕ್ಕೂ ಅವರು ಅಕಾಂಕ್ಷಿ.

ಸಮ್ಮರ್‌ ಅವರ ಒಲಿಂಪಿಕ್ ಪಯಣ ಆರಂಭವಾಗಿದ್ದು 2020ರ ಟೋಕಿಯೊ ಕ್ರೀಡೆಗಳಲ್ಲಿ. ಆಗ ಈ ಬಾಲೆ 200 ಮೀ. ಫ್ರೀಸ್ಟೈಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

‘ಟೋಕಿಯೊ ಒಲಿಂಪಿಕ್ಸ್‌ಗೆ ನಾನು ಮಾನಸಿಕವಾಗಿ ಸಜ್ಜಾಗಿರಲಿಲ್ಲ. ಇನ್ನೂ ಎಳೆಯ ವಯಸ್ಸು. ಸ್ಟ್ಯಾಂಡ್‌ ಕೂಡ ಖಾಲಿಯಾಗಿದ್ದವು. ಜೊತೆಗೆ ಅದು ಸೀನಿಯರ್‌ ಮಟ್ಟದಲ್ಲಿ ನನ್ನ ಮೊದಲ ಅಂತರರಾಷ್ಟ್ರೀಯ ಸ್ಪರ್ಧೆಯಾಗಿತ್ತು’ ಎಂದು ಮೆಕಿಂಟೋಷ್‌ ಸ್ಮರಿಸಿದರು.

‘ನಾನಾಗ ಸಾಕಷ್ಟು ಕಲಿತೆ. ಸ್ಟ್ಯಾಂಡ್‌ನಲ್ಲಿರುವ ಪ್ರೇಕ್ಷಕರ ಬೆಂಬಲ ವೇಗವಾಗಿ ಸಾಗಲು ಉತ್ಸಾಹ ಮೂಡಿಸುವ ಇಂಧನವಾಗುತ್ತದೆ’ ಎಂದರು.

ಸಮ್ಮರ್‌ ಮೆಕಿಂಟೋಷ್‌ಳ ಸಾಧನೆ ಕುಟುಂಬ ಸದಸ್ಯರಿಗೆ ಸ್ವಲ್ಪವೂ ಅಚ್ಚರಿ ಮೂಡಿಸಿಲ್ಲ. ‘ಏಳು– ಎಂಟನೇ ವಯಸ್ಸಿನಲ್ಲೇ ಈಕೆ ಅತ್ಯಮೋಘ ಈಜುಪಟುವಾಗಲಿದ್ದಾಳೆ ಎಂಬುದು ನಮಗೆ ಖಚಿತವಾಗಿತ್ತು. ಅಕೆ ತನಗಿಂತ 10–12 ವರ್ಷದ ಈಜುಪಟುಗಳನ್ನು ಸಾಕಷ್ಟು ಅಂತರದಿಂದ ಹಿಂದೆಹಾಕುತ್ತಿದ್ದಳು’ ಎನ್ನುತ್ತಾರೆ ತಂದೆ ಗ್ರೆಗ್‌ ಮೆಕಿಂಟೋಷ್‌.

ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಆಕೆ ನಾಲ್ಕು ಚಿನ್ನಗಳ ಒಡತಿ. 2022ರ ಬುಡಾಪೆಸ್ಟ್‌ ಮತ್ತು 2023ರ ಫುಕುವೊಕಾ ಚಾಂಪಿಯನ್‌ಷಿಪ್‌ನಲ್ಲಿ ಆಕೆ 200 ಮೀ ಬಟರ್‌ಫ್ಲೈ ಮತ್ತು 400 ಮೀ. ಮೆಡ್ಲೆಯಲ್ಲಿ ಚಾಂಪಿಯನ್‌ ಆಗಿದ್ದರು. ಕಳೆದ ಮೇ ತಿಂಗಳಲ್ಲಿ ತವರಿನ ಒಲಿಂಪಿಕ್‌ ಟ್ರಯಲ್ಸ್‌ನಲ್ಲಿ ಈಕೆ 400 ಮೀ. ಮೆಡ್ಲೆಯಲ್ಲಿ ತಮ್ಮದೇ ವಿಶ್ವ ದಾಖಲೆಯನ್ನು ಮುರಿದಿದ್ದರು.

ಕ್ರೀಡೆ ಈಕೆಗೆ ರಕ್ತಗತ. ಸಮ್ಮರ್‌ಳ ತಾಯಿ ಜಿಲ್‌ ಅವರು 1984ರ ಲಾಸ್ ಏಂಜಲಿಸ್‌ ಒಲಿಂಪಿಕ್ಸ್‌ನಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಕ್ಕ ಬ್ರೂಕ್‌ ಹೆಸರಾಂತ ಫಿಗರ್‌ ಸ್ಕೇಟರ್‌ ಆಗಿದ್ದು 2020ರ ಯುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು.

‘ಆಕೆ ತನ್ನೆಲ್ಲಾ ಸಮಯವನ್ನು ಈಜಿಗೇ ನೀಡುತ್ತಾಳೆ’ ಎಂದು ಅಕ್ಕ ಬ್ರೂಕ್‌ ಟೊರಾಂಟೊದ ಉಪನಗರದಲ್ಲಿರುವ ಮನೆಯಿಂದ ಹೇಳಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.