ADVERTISEMENT

ತೂಗುಯ್ಯಾಲೆಯಲ್ಲಿ ಥಾಮಸ್–ಊಬರ್ ಕಪ್

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 12:54 IST
Last Updated 14 ಸೆಪ್ಟೆಂಬರ್ 2020, 12:54 IST
ಷಟಲ್
ಷಟಲ್   

ಕ್ವಾಲಾಲಂಪುರ: ಕೋವಿಡ್ 19ರ ಆತಂಕದಿಂದ ವಿವಿಧ ದೇಶಗಳು ಹಿಂದೆ ಸರಿದಿದ್ದರರಿಂದ ಮತ್ತು ಸೈನಾ ನೆಹ್ವಾಲ್ ಅವರಂಥ ಪ್ರಮುಖ ಷಟ್ಲರ್‌ಗಳಿಂದ ವಿರೋಧ ವ್ಯಕ್ತವಾದ ಕಾರಣ ಈ ಬಾರಿಯ ಥಾಮಸ್‌ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿ ತೂಗುಯ್ಯಾಲೆಯಲ್ಲಿದೆ. ಟೂರ್ನಿಯನ್ನು ಮುಂದೂಡಬೇಕು ಅಥವಾ ರದ್ದುಗೊಳಿಸಬೇಕು ಎಂದು ಮಲೇಷ್ಯಾ ಬ್ಯಾಡ್ಮಿಂಟನ್ ಸಂಸ್ಥೆ ಸೋಮವಾರ ಆಗ್ರಹಿಸಿದೆ.

‍‍‍ಪುರುಷರ ಥಾಮಸ್ ಕಪ್ ಮತ್ತು ಮಹಿಳೆಯರ ಊಬರ್ ಕಪ್ ಟೂರ್ನಿಯನ್ನು ಎರಡು ಬಾರಿ ಮುಂದೂಡಲಾಗಿತ್ತು. ಕೊನೆಗೆ, ಮುಂದಿನ ತಿಂಗಳ ಮೂರರಿಂದ 11ರ ವರೆಗೆ ಡೆನ್ಮಾರ್ಕ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಮಾರ್ಚ್‌ನಲ್ಲಿ ಬ್ಯಾಡ್ಮಿಂಟನ್ ಟೂರ್ನಿಗಳು ಸ್ಥಗಿತಗೊಂಡ ನಂತರ ನಡೆಸಲು ಉದ್ದೇಶಿಸಿರುವ ಮೊದಲ ಟೂರ್ನಿ ಇದಾಗಿದೆ.

ಥಾಯ್ಲೆಂಡ್‌, ಥಾಯ್ವಾನ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಕಣಕ್ಕೆ ಇಳಿಸದೇ ಇರಲು ಅಲ್ಲಿನ ಬ್ಯಾಡ್ಮಿಂಟನ್ ಸಂಸ್ಥೆಗಳು ನಿರ್ಧರಿಸಿದ್ದವು. ಇದರ ಬೆನ್ನಲ್ಲೇ ಇಂಡೊನೇಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳು ಕೂಡ ಟೂರ್ನಿಯಿಂದ ಹಿಂದೆ ಸರಿದಿದ್ದವು. ಇಂಡೊನೇಷ್ಯಾ 13 ಬಾರಿ ಥಾಮಸ್ ಕಪ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.

ADVERTISEMENT

ಬಲಿಷ್ಠ ಚೀನಾ ಮತ್ತು ಜಪಾನ್ ಇನ್ನೂ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಲಿಲ್ಲ. ಆದರೆ ಏಷ್ಯಾದ ಪ್ರಮುಖ ಷಟ್ಲರ್‌ಗಳ ಅನುಪಸ್ಥಿತಿಯಲ್ಲಿ ಟೂರ್ನಿಯನ್ನು ನಡೆಸಬೇಕೇ ಬೇಡವೇ ಎಂಬ ಪ್ರಶ್ನೆ ಆಯೋಜಕರನ್ನು ಕಾಡುತ್ತಿದೆ.

’ತಂಡಗಳು ಹೀಗೆಯೇ ಹಿಂದೆ ಸರಿಯುವುದು ಮುಂದುವರಿದರೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಮತ್ತೊಮ್ಮೆ ಚಿಂತನೆ ನಡೆಸಬೇಕಾಗಬಹುದು. ಟೂರ್ನಿಯನ್ನು ಮುಂದೂಡುವುದು ಅಥವಾ ರದ್ದು ಮಾಡುವುದು ಫೆಡರೇಷನ್‌ ಮುಂದಿರುವ ಆಯ್ಕೆಗಳು‘ ಎಂದು ಮಲೇಷ್ಯಾ ಬ್ಯಾಡ್ಮಿಂಟನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆನಿ ಗೋಹ್‌ ಅಭಿಪ್ರಾಯಪಟ್ಟರು.

ಟೂರ್ನಿಯಲ್ಲಿ ಆಡಲು ಭಾರತ ಎರಡೂ ವಿಭಾಗಗಳ ತಂಡಗಳನ್ನು ಕಳುಹಿಸಲಿದೆ. ಆದರೆ ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್ ಆಯೋಜಕರ ನಿರ್ಧಾರವನ್ನು ಭಾನುವಾರ ಪ್ರಶ್ನಿಸಿದ್ದರು. ’ಸಂಕಷ್ಟದ ಸಂದರ್ಭದಲ್ಲಿ ಟೂರ್ನಿಯನ್ನು ಆಯೋಜಿಸುವುದು ಎಷ್ಟು ಸರಿ‘ ಎಂದು ಕೇಳಿದ್ದ ಅವರು ‘ಟೂರ್ನಿ ಮುಂದೂಡುವುದೇ ಉಚಿತ‘ ಎಂದಿದ್ದರು.

ಟೂರ್ನಿಯನ್ನು ಮುಂದೂಡುವ ಪರಿಸ್ಥಿತಿ ನಿರ್ಮಾಣವಾದರೆ ಬ್ಯಾಡ್ಮಿಂಟನ್ ಚಟುವಟಿಕೆ ಪುನರಾರಂಭಗೊಳಿಸಲು ಸಜ್ಜಾಗಿರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ಗೆ ದೊಡ್ಡ ಹೊಡೆತವಾಗಲಿದೆ. ಈ ವರ್ಷದ ಇತರ ಟೂರ್ನಿಗಳನ್ನು ನಡೆಸದೇ ಇರಲು ನಿರ್ಧಿಸಿದ್ದ ಫೆಡರೇಷನ್‌ ಪಾಲಿಗೆ ಥಾಮಸ್ ಮತ್ತು ಊಬರ್ ಕಪ್ ಟೂರ್ನಿ ಮಹತ್ವದ ಕಾರ್ಯಕ್ರಮವಾಗಿದೆ.

ಥಾಮಸ್–ಊಬರ್ ಕಪ್‌ ನಂತರ ಡೆನ್ಮಾರ್ಕ್‌ನಲ್ಲೇ ಮತ್ತೆರಡು ಟೂರ್ನಿಗಳನ್ನು ಆಯೋಜಿಸುವ ಚಿಂತನೆ ಇತ್ತು. ನವೆಂಬರ್‌ 10ರಿಂದ ಅವುಗಳಿಗೆ ಚಾಲನೆ ನೀಡಲು ತೀರ್ಮಾನಿಸಲಾಗಿತ್ತು. ಈಗ ಅವುಗಳ ಮೇಲೆಯೂ ಕರಿನೆರಳು ಬಿದ್ದಿದೆ.

ಥಾಮಸ್‌–ಊಬರ್ ಕಪ್‌ ಟೂರ್ನಿಗೆ ಭಾರತ ತಂಡವನ್ನು ಕಳೆದ ವಾರ ಪ್ರಕಟಿಸಲಾಗಿತ್ತು. ಪುರುಷರ ತಂಡವನ್ನು ಕಿದಂಬಿ ಶ್ರೀಕಾಂತ್ ಮತ್ತು ಮಹಿಳಾ ತಂಡವನ್ನು ಪಿ.ವಿ.ಸಿಂಧು ಮುನ್ನಡೆಸಲಿದ್ದಾರೆ ಎಂದು ಭಾರತ ಬ್ಯಾಡ್ಮಿಂಟನ್ ಫೆಡರೇಷನ್ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.