ADVERTISEMENT

ಥಾಮಸ್ ಕಪ್‌: ಇಂಗ್ಲೆಂಡ್ ವಿರುದ್ಧ ಸುಲಭ ಜಯ, ಎಂಟರ ಘಟ್ಟಕ್ಕೆ ಭಾರತ

ಪಿಟಿಐ
Published 29 ಏಪ್ರಿಲ್ 2024, 13:03 IST
Last Updated 29 ಏಪ್ರಿಲ್ 2024, 13:03 IST
<div class="paragraphs"><p> ಎಚ್‌.ಎಸ್‌.ಪ್ರಣಯ್</p></div>

ಎಚ್‌.ಎಸ್‌.ಪ್ರಣಯ್

   

ಚೆಂಗ್ಡು (ಚೀನಾ): ಹಾಲಿ ಚಾಂಪಿಯನ್ ಭಾರತ ತಂಡ ಸೋಮವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ 5–0 ಯಿಂದ ಇಂಗ್ಲೆಂಡ್‌ ತಂಡವನ್ನು ಸದೆಬಡಿದು ಥಾಮಸ್‌ ಕಪ್‌ ಟೂರ್ನಿ ಎಂಟರ ಘಟ್ಟಕ್ಕೆ ಮುನ್ನಡೆಯಿತು.

ಮೊದಲ ಪಂದ್ಯದಲ್ಲಿ 4–1 ರಿಂದ ಥಾಯ್ಲೆಂಡ್ ತಂಡವನ್ನು ಸೋಲಿಸಿದ್ದ ಭಾರತ ಎರಡನೇ ಗೆಲುವಿನಿಂದ ನಾಕೌಟ್‌ಗೆ ಅರ್ಹತೆ ಪಡೆಯಿತು.

ADVERTISEMENT

ಎಚ್‌.ಎಸ್‌.ಪ್ರಣಯ್ 21–15, 21–15ರಲ್ಲಿ ನೇರ ಗೇಮ್‌ಗಳಿಂದ ಹ್ಯಾರಿ ಹುವಾಂಗ್ ಅವರನ್ನು ಸೋಲಿಸಿ ಭಾರತಕ್ಕೆ 1–0 ಮುನ್ನಡೆ ಒದಗಿಸಿದರು. ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಡಬಲ್ಸ್‌ ಪಂದ್ಯದಲ್ಲಿ ಬೆನ್‌ ಲೇನ್ ಮತ್ತು ಸೀನ್‌ ವೆಂಡಿ ಅವರನ್ನು ಸೋಲಿಸಲು ಮೂರು ಗೇಮ್‌ಗಳನ್ನು ಆಡಬೇಕಾಯಿತು. ಅಂತಿಮವಾಗಿ 2022ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಭಾರತದ ಜೋಡಿ 21–17, 19–21, 21–15ರಲ್ಲಿ ಜಯಗಳಿಸಿತು.

ಮಾಜಿ ಅಗ್ರಮಾನ್ಯ ಆಟಗಾರ ಕಿದಂಬಿ ಶ್ರೀಕಾಂತ್‌ 21–16, 21–11 ರಿಂದ ನದೀಮ್ ದಲ್ವಿ ಅವರನ್ನು ಸೋಲಿಸಿ ತಂಡಕ್ಕೆ 3–0 ಗೆಲುವಿನ ಮುನ್ನಡೆ ಒದಗಿಸಿದರು. ಭಾರತದ ಎರಡನೇ ಡಬಲ್ಸ್‌ ತಂಡವಾದ ಎಂ.ಆರ್‌.ಅರ್ಜುನ್‌– ಧ್ರುವ್ ಕಪಿಲಾ ಜೋಡಿ 21–7, 21–19 ರಿಂದ ರೋರಿ ಎಸ್ಟನ್‌– ಅಲೆಕ್ಸ್‌ ಗ್ರೀನ್ ಜೋಡಿಯನ್ನು ಸೋಲಿಸಿತು.

ಅಂತಿಮ ಸಿಂಗಲ್ಸ್‌ನಲ್ಲಿ 24 ವರ್ಷದ ಕಿರಣ್ ಜಾರ್ಜ್ 21–18, 21–12ರಲ್ಲಿ ನೇರ ಗೇಮ್‌ಗಳಿಂದ ಚೋಳನ್ ಕಾಯನ್ ಅವರನ್ನು ಸೋಲಿಸಿದರು.‌

ಭಾರತ, ಬುಧವಾರ ನಡೆಯುವ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ 14 ಬಾರಿಯ ಚಾಂಪಿಯನ್ ಇಂಡೊನೇಷ್ಯಾ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.