ADVERTISEMENT

ಪ‍್ಯಾರಾಲಿಂಪಿಕ್ಸ್‌: ಮಹಿಳೆಯರ 100 ಮೀ. ಓಟ; ಕ್ಸಿಯಾಗೆ ವಿಶ್ವದಾಖಲೆಯ ಚಿನ್ನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 5:48 IST
Last Updated 28 ಆಗಸ್ಟ್ 2021, 5:48 IST
ಮಹಿಳೆಯರ ಟಿ35 ವಿಭಾಗದ 100 ಮೀ. ಓಟದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಚೀನಾದ ಹೋ ಕ್ಸಿಯಾ– ರಾಯಿಟರ್ಸ್ ಚಿತ್ರ
ಮಹಿಳೆಯರ ಟಿ35 ವಿಭಾಗದ 100 ಮೀ. ಓಟದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಚೀನಾದ ಹೋ ಕ್ಸಿಯಾ– ರಾಯಿಟರ್ಸ್ ಚಿತ್ರ   

ಟೋಕಿಯೊ: ಅದ್ಭುತ ಸಾಮರ್ಥ್ಯ ತೋರಿದ ಚೀನಾದ ಹೋ ಕ್ಸಿಯಾ, ಮಹಿಳೆಯರ 100 ಮೀ. ಓಟದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನಕ್ಕೆ ಮುತ್ತಿಟ್ಟರು.

ಟಿ35 ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು 13 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆಸ್ಟ್ರೇಲಿಯಾದ ಇಸಿಸ್‌ ಹೋಲ್ಟ್‌ ಬೆಳ್ಳಿ (13.13 ಸೆ.) ಮತ್ತು ಗ್ರೇಟ್ ಬ್ರಿಟನ್‌ನ ಮರಿಯಾ ಲಿಲಿ (14.8 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

2016ರ ರಿಯೊ ಕೂಟದಲ್ಲಿ ಎರಡು ಚಿನ್ನ ಗೆದ್ದಿದ್ದ ಚೀನಾದ ಹೋ ಕ್ಸಿಯಾ ಅವರು ಇಲ್ಲಿಯೂ ಪಾರಮ್ಯ ಮೆರೆದರು.

ADVERTISEMENT

ಬ್ರೆಜಿಲ್‌ಗೆ ‘ಮೊದಲ‘ ಚಿನ್ನ: ಈ ಬಾರಿಯ ಪ‍್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಮೊದಲ ಚಿನ್ನ ಗೆದ್ದ ಶ್ರೇಯವನ್ನು ಬ್ರೆಜಿಲ್ ತನ್ನದಾಗಿಸಿಕೊಂಡಿತು.

ಬ್ರೆಜಿಲ್‌ನ ಯೆಲ್ಸಿನ್‌ ಜಾಕ್ಸ್ ಟೋಕಿಯೊ ಕೂಟದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಚಿನ್ನ ವಿಜೇತ ಮೊದಲ ಅಥ್ಲೀಟ್‌ ಎನಿಸಿಕೊಂಡರು. 5 ಸಾವಿರ ಮೀಟರ್ಸ್‌ನ ಟಿ11 ವಿಭಾಗದಲ್ಲಿ ಅವರು 15 ನಿ. 13.62 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಜಪಾನ್‌ನ ಕೆನ್ಯಾ ಕರಾಸವಾ (15 ನಿ. 18.12 ಸೆ.) ಅವರನ್ನು ಹಿಂದಿಕ್ಕಿದರು. ಜಪಾನ್‌ನವರೇ ಆದ ಶಿನ್ಯಾ ವಾಡಾ (15 ನಿ. 21.03 ಸೆ.) ಕಂಚು ಗೆದ್ದರು. ಬ್ರೆಜಿಲ್‌ನ ಸಿಲ್ವಾನಿಯಾ ಕೋಸ್ಟಾ ದಿಒಲಿವೆರಾ (5 ಮೀ.) ಮಹಿಳೆಯರ ಟಿ11 ಲಾಂಗ್‌ಜಂಪ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.