ADVERTISEMENT

ಟ್ರೀಸಾ– ಗಾಯತ್ರಿ ಜೋಡಿ ಶುಭಾರಂಭ

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ

ಪಿಟಿಐ
Published 21 ಮೇ 2024, 16:08 IST
Last Updated 21 ಮೇ 2024, 16:08 IST
ಭಾರತದ ಗಾಯತ್ರಿ ಗೋಪಿಚಂದ್‌ ಮತ್ತು ಟ್ರಿಸಾ ಜೋಳಿ –ಪಿಟಿಐ ಚಿತ್ರ
ಭಾರತದ ಗಾಯತ್ರಿ ಗೋಪಿಚಂದ್‌ ಮತ್ತು ಟ್ರಿಸಾ ಜೋಳಿ –ಪಿಟಿಐ ಚಿತ್ರ   

ಕೌಲಾಲಂಪುರ (ಪಿಟಿಐ): ಭಾರತದ ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದರು. 

ಏಳನೇ ಶ್ರೇಯಾಂಕದ ಟ್ರಿಸಾ– ಗಾಯತ್ರಿ ಜೋಡಿಯು ಮಂಗಳವಾರ ನಡೆದ ಆರಂಭಿಕ ಸುತ್ತಿನಲ್ಲಿ 21-14, 21-10 ಅಂತರದಲ್ಲಿ ನೇರ ಗೇಮ್‌ಗಳಲ್ಲಿ ಚೀನಾ ತೈಪೆಯ ಹುವಾಂಗ್ ಯು ಹ್ಸುನ್ ಮತ್ತು ಲಿಯಾಂಗ್ ಟಿಂಗ್ ಯು ಅವರನ್ನು ಹಿಮ್ಮೆಟ್ಟಿಸಿತು.

ಪುರುಷರ ಸಿಂಗಲ್ಸ್ ಕ್ವಾಲಿಫೈಯರ್‌ ಸುತ್ತಿನಲ್ಲಿ ಕಣದಲ್ಲಿದ್ದ ಭಾರತದ ನಾಲ್ವರೂ ನಿರಾಸೆ ಮೂಡಿಸಿದರು. ಯಾರಿಗೂ ಮುಖ್ಯ ಸುತ್ತು ಪ್ರವೇಶಿಸಲು ಸಾಧ್ಯವಾಗಿಲ್ಲ.

ADVERTISEMENT

ಕಳೆದ ಡಿಸೆಂಬರ್‌ನಲ್ಲಿ ಒಡಿಶಾ ಮಾಸ್ಟರ್ಸ್‌ನಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಿದ್ದ ಸತೀಶ್ ಕುಮಾರ್ ಕರುಣಾಕರನ್ ಅವರು ಕ್ವಾಲಿಫೈಯರ್‌ನ ಮೊದಲ ಪಂದ್ಯದಲ್ಲಿ 21-15, 21-19 ರಿಂದ ಆತಿಥೇಯ ಮಲೇಷ್ಯಾದ ಚೀಮ್ ಜೂನ್ ವೀ ಅವರನ್ನು ಸೋಲಿಸಿದರು. ಆದರೆ, ಎರಡನೇ ಪಂದ್ಯದಲ್ಲಿ ಅವರು 21-13, 20-22, 13-21 ರಿಂದ ಇಂಡೊನೇಷ್ಯಾದ ಶೇಸರ್ ಹಿರೆನ್ ರುಸ್ತಾವಿಟೊ ಅವರಿಗೆ ಮಣಿದರು.

ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತ ಕರ್ನಾಟಕದ ಆಯುಷ್‌ ಶೆಟ್ಟಿ ಅವರು ಮೊದಲ ಪಂದ್ಯದಲ್ಲಿ 21-7, 21-14 ರಿಂದ ಸ್ವದೇಶದ ಕಾರ್ತಿಕೇಯ ಗುಲ್ಶನ್ ಕುಮಾರ್ ವಿರುದ್ಧ ಸುಲಭ ಗೆಲುವು ಸಾಧಿಸಿದರು. ಆದರೆ, ನಂತರದ ಪಂದ್ಯದಲ್ಲಿ 21-23, 21-16, 17-21 ರಿಂದ ಥಾಯ್ಲೆಂಡ್‌ನ ಪಾನಿಚ್ಚಾಫೋನ್ ತೀರರತ್ಸಕುಲ್ ಅವರಿಗೆ ಶರಣಾದರು.

ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಎಸ್. ಶಂಕರ್ ಸುಬ್ರಮಣಿಯನ್ ಅವರು ಆರಂಭಿಕ ಸುತ್ತಿನಲ್ಲಿ 12-21, 17-21ರಿಂದ ರುಸ್ತಾವಿಟೊ ವಿರುದ್ಧ ಸೋತರು.

ಮಹಿಳೆಯರ ಸಿಂಗಲ್ಸ್‌ ಕ್ವಾಲಿಫೈಯರ್‌ನಲ್ಲಿ ತಾನ್ಯಾ ಹೇಮಂತ್‌ 21-23, 8-21 ರಿಂದ ಚೀನಾ ತೈಪೆಯ ಲಿನ್ ಸಿಹ್ ಯುನ್ ಅವರಿಗೆ ಮಣಿದರು. ಡಬಲ್ಸ್‌ನಲ್ಲಿ ಪಲಕ್ ಅರೋರಾ ಮತ್ತು ಉನ್ನತಿ ಹೂಡಾ ಜೋಡಿಯು 10-21, 5-21 ಅಂತರದಲ್ಲಿ ಚೀನಾ ತೈಪೆಯ ಹ್ಸು ಯಿನ್-ಹುಯಿ ಮತ್ತು ಲಿನ್ ಝಿಜ್ ಯುನ್ ವಿರುದ್ಧ ಸೋತರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.