ಶ್ರೀಜಾ ಅಕುಲಾ
–ಪಿಟಿಐ ಚಿತ್ರ
ದೋಹಾ: ಭಾರತದ ಅಗ್ರ ಆಟಗರ್ತಿ ಶ್ರೀಜಾ ಆಕುಲ ಅವರು ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು. ಆದರೆ ಭಾರತದ ಇತರ ಸ್ಪರ್ಧಿಗಳು ಯಶಸ್ಸು ಕಂಡರು. ದಿಯಾ ಚಿತಾಳೆ ಮತ್ತು ಮಾನುಷ್ ಶಾ ಅವರು ಶನಿವಾರ ಎರಡನೇ ಸುತ್ತಿಗೆ ಮುನ್ನಡೆದರು.
ಇವರ ಜೊತೆಗೆ ಮುಖರ್ಜಿದ್ವಯರಾದ ಐಹಿಕಾ ಮತ್ತು ಸುತೀರ್ಥ ಜೋಡಿ, ದಿಯಾ ಮತ್ತು ಯಶಸ್ವಿನಿ ಘೋರ್ಪಡೆ ಜೋಡಿ ಮಹಿಳಾ ಡಬಲ್ಸ್‌ನಲ್ಲಿ ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿತು. ಪುರುಷರ ಡಬಲ್ಸ್‌ನಲ್ಲಿ ಮಾನವ್ ಠಕ್ಕರ್ ಮತ್ತು ಮಾನುಷ್ ಸಹಾ ಮುನ್ನಡೆದರು.
ಲಯಕ್ಕೆ ಪರದಾಡಿದ ಆಕುಲ 1–4 ರಿಂದ (11–9, 8–11, 6–11, 5–11, 2-11) ಥಾಯ್ಲೆಂಡ್‌ನ ಸುತಾಸಿನಿ ಸೆವೆಟ್ಟಬಟ್ ಅವರಿಗೆ ಮಣಿದರು. ಸುತಾಸಿನಿ ವಿಶ್ವ ಕ್ರಮಾಂಕದಲ್ಲಿ 84ನೇ ಸ್ಥಾನದಲ್ಲಿದ್ದು ಕೇವಲ 33 ನಿಮಿಷಗಳಲ್ಲಿ ಗೆಲುವು ಕಂಡರು.
ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಐಹಿಕಾ–ಸುತೀರ್ಥ ಮಹಿಳಾ ಡಬಲ್ಸ್‌ನಲ್ಲಿ 3–2 ರಿಂದ (4–11, 11–9, 10–12, 11–9, 11–7) ಟರ್ಕಿಯ ಓಜ್ಗೆ ಯಿಲ್ಮಾಝ್– ಈಸ್ ಹರಾಕ್ ಜೋಡಿಯನ್ನು ಸೋಲಿಸಿತು. ದಿಯಾ– ಯಶಸ್ವಿನಿ ಜೋಡಿ 9–11, 11–2, 11–9, 11–8 ರಿಂದ ಉಜ್ಬೇಕಿಸ್ತಾನದ ಮೆಗ್ದೀವಾ– ಎರ್ಕೆಬಯೇವಾ ಜೋಡಿಯನ್ನು ಹಿಮ್ಮೆಟ್ಟಿಸಿತು.
ಠಕ್ಕರ್– ಮಾನುಷ್ ಶಾ ಜೋಡಿ 11–7, 11–8, 11–6 ರಲ್ಲಿ ಸ್ಲೊವೇನಿಯಾದ ಡೆನಿ ಕೊಝುಲ್–ಪೀಟರ್ ಹ್ರಿಬರ್ ವಿರುದ್ಧ ಗೆಲುವು ಸಾಧಿಸಿತು.
ಶಾ ನಂತರ ಪುರುಷರ ಸಿಂಗಲ್ಸ್‌ನಲ್ಲಿ 4–2 ರಿಂದ (11–6, 2–11, 11–7, 11–6, 5–11, 11–6) ಪೋರ್ಚುಗಲ್‌ನ ತಿಯಾಗೊ ಅಪೊಲೊನಿಯ ಎದುರು ಜಯಗಳಿಸಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ದಿಯಾ 11–4, 11–7, 11–3, 14–12ರಲ್ಲಿ ಸ್ಪೇನ್‌ನ ಸೋಫಿಯಾ ಷುವಾನ್ ಝಾಂಗ್ ಎದುರು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.