ADVERTISEMENT

ಶಿಬಿರಕ್ಕೆ ಹಾಜರಾಗಿ: ಟಿಟಿಎಫ್ಐ

16 ಮಂದಿಗೆ ಸಮ್ಮತಿ ಕೇಳಿ ಪತ್ರ; ಸಮಯ ಬೇಕೆಂದ ಟೇಬಲ್‌ ಟೆನಿಸ್‌ ಆಟಗಾರರು

ಪಿಟಿಐ
Published 18 ಮೇ 2020, 21:24 IST
Last Updated 18 ಮೇ 2020, 21:24 IST
ಜಿ.ಸತ್ಯನ್‌ (ಎಡ) ಹಾಗೂ ಶರತ್‌ ಕಮಲ್‌
ಜಿ.ಸತ್ಯನ್‌ (ಎಡ) ಹಾಗೂ ಶರತ್‌ ಕಮಲ್‌   

ನವದೆಹಲಿ : ಸರ್ಕಾರ ಕ್ರೀಡಾ ಸಂಕೀರ್ಣಗಳಲ್ಲಿ ತರಬೇತಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಭಾರತ ಟೇಬಲ್‌ ಟೆನಿಸ್‌ ಫೆಡರೇಷನ್‌, ತರಬೇತಿ ಶಿಬಿರಕ್ಕೆ ಹಾಜರಾಗಲು ದೇಶದ ಅಗ್ರ 16 ಆಟಗಾರರಿಗೆ ಸಮ್ಮತಿ ಕೇಳಿ ಪತ್ರ ಬರೆದಿದೆ. ಆದರೆ ಕೆಲಕಾಲ ಬೇಕಾಗುತ್ತದೆ ಎಂದು ಆಟಗಾರರು ಹೇಳಿದ್ದಾರೆ.

ಅಗ್ರಮಾನ್ಯ ಆಟಗಾರರಾದ ಶರತ್‌ ಕಮಲ್‌, ಜಿ.ಸತ್ಯನ್‌ ಸೇರಿದಂತೆ ಪ್ರಮುಖ ಆಟಗಾರರು, ‘ಕೊರೊನಾ ಸೋಂಕು ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಪ್ರಯಾಣ ಮಾಡುವುದು ಶ್ರೇಯಸ್ಕರ ಎನಿಸುವುದಿಲ್ಲ’ ಎಂದಿದ್ದಾರೆ. ಆಟಗಾರರಿಗೆ ಎನ್‌ಐಎಸ್‌ ಪಟಿಯಾಲ, ಸೋನೆಪತ್‌ ಮತ್ತು ಕೋಲ್ಕತ್ತದಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ.

‘ತಿಂಗಳಾಂತ್ಯದಲ್ಲಿ ಶಿಬಿರಕ್ಕೆ ಸೇರುವಂತೆ ನಮ್ಮನ್ನು ಕೇಳಲಾಗಿದೆ. ಇದು ತುಂಬಾ ಬೇಗ ಎನಿಸಿದೆ. ಸೋಂಕು ಪ್ರಕರಣಗಳು ಹೆಚ್ಚಿದ್ದು, ಕೆಲವೆಡೆ ಪ್ರಯಾಣ ನಿರ್ಬಂಧವೂ ಇದೆ. ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುವವರೆಗೆ ತರಬೇತಿಗೆ ಕಾಯವುದು ಉತ್ತಮ’ ಎಂದು ವಿಶ್ವ ಕ್ರಮಾಂಕದಲ್ಲಿ 31ನೇ ಸ್ಥಾನ ದಲ್ಲಿರುವ ಶರತ್ ತಿಳಿಸಿದರು.

ADVERTISEMENT

‘ಅಂತರರಾಷ್ಟ್ರೀಯ ಟೇಬಲ್‌ ಟೆನಿಸ್‌ ಫೆಡರೇಷನ್‌ ತನ್ನೆಲ್ಲಾ ಚಟುವಟಿಕೆಗಳನ್ನು ಜೂನ್‌ ಅಂತ್ಯದವರೆಗೆ ಸ್ಥಗಿತಗೊಳಿಸಿದೆ. ಸದ್ಯದಲ್ಲಿ ಯಾವುದೇ ಪೂರ್ವನಿರ್ಧಾರಿತ ಟೂರ್ನಿಗಳಿಲ್ಲ. ಎಲ್ಲ ಆಟಗಾರರು ಒಟ್ಟಿಗೆ ಸೇರಿದರೆ ಒಳ್ಳೆಯದು. ಆದರೆ ಸದ್ಯಕ್ಕಂತೂ ಆದಾಗದು’ ಎಂದಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ದಿನದಿಂದ ಆಟಗಾರರು ಒಂದು ರೀತಿ ‘ಗೃಹ ಬಂಧನ’ದಲ್ಲಿದ್ದಾರೆ. ಕೆಲವು ರಿಯಾಯಿತಿಗಳೊಡನೆ ಸರ್ಕಾರ ಲಾಕ್‌ಡೌನ್‌ಅನ್ನು ಮೇ 31ರವರೆಗೆ ವಿಸ್ತರಿಸಿದೆ.

ಪ್ರಸಕ್ತ ಪರಿಸ್ಥಿತಿಯಲ್ಲಿ ತವರಿನಲ್ಲೇ ಅಭ್ಯಾಸ ನಡೆಸಲು ಬಯಸುವುದಾಗಿ ಚೆನ್ನೈನಲ್ಲೇ ನೆಲೆಸಿರುವ ಇನ್ನೊಬ್ಬ ಆಟಗಾರ ಸತ್ಯನ್‌ ಹೇಳುತ್ತಾರೆ. ‘ಈಗಿನ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುವುದು ಸುರಕ್ಷಿತವಲ್ಲ. ಚೆನ್ನೈನಲ್ಲಿರುವ ರಾಮನ್‌ ತರಬೇತಿ ಕೇಂದ್ರದಲ್ಲಿ ಕೋಚ್‌ ರಾಮನ್‌ ಅವರಿಂದ ತರಬೇತಿ ಪಡೆಯುವುದಕ್ಕೆ ಆದ್ಯತೆ ನೀಡುತ್ತೇನೆ’ ಎಂದಿದ್ದಾರೆ.

ತರಬೇತಿ ಶಿಬಿರಕ್ಕೆ ಲಭ್ಯತೆ ಕುರಿತು ತಿಳಿಸುವಂತೆ ಟಿಟಿಎಫ್‌ಐ ಮಹಾ ಕಾರ್ಯದರ್ಶಿ ಎಂ.ಪಿ.ಸಿಂಗ್‌ ಅವರು ಸೋಮವಾರ ಬೆಳಿಗ್ಗೆ ಆಟಗಾರರಿಗೆ ಪತ್ರ ಬರೆದಿದ್ದಾರೆ. ಫೆಡರೇಷನ್‌ ಮುಂದಿನ ವಾರ ಶಿಬಿರ ಆರಂಭಿಸುವ ಇರಾದೆ ಹೊಂದಿದೆ. ಎಂಟು ಆಟಗಾರರು ಮತ್ತು ಇಷ್ಟೇ ಸಂಖ್ಯೆಯ ಆಟಗಾರ್ತಿಯರಿಗೆ ಪತ್ರ ಬರೆಯಲಾಗಿದೆ.

ಆದರೆ ಪ್ರಯಾಣ ನಿರ್ಬಂಧದ ಹಿನ್ನೆಲೆಯಲ್ಲಿ ಆಟಗಾರರು ಒಂದೇ ಸ್ಥಳದಲ್ಲಿ ಹೇಗೆ ಸೇರಬಹುದು ಎಂಬುದನ್ನು ಕಾದುನೋಡಬೇಕಾಗಿದೆ. ಪ್ರಮುಖ ಆಟಗಾರ್ತಿ ಮಣಿಕಾ ಬಾತ್ರಾ ಪುಣೆಯಲ್ಲಿದ್ದಾರೆ.

ಶಿಬಿರಕ್ಕೆ ಲಭ್ಯತೆ ಕುರಿತು ತಿಳಿಸುವಂತೆ ತರಬೇತುದಾರರಾದ ಸೌಮ್ಯದೀಪ ರಾಯ್‌ ಮತ್ತು ಅರೂಪ್‌ ಬಸಕ್‌ ಅವರಿಗೂ ಫೆಡರೇಷನ್‌ ಪತ್ರ ಬರೆದಿದೆ.

ನಾಮನಿರ್ದೇಶನ: ಟಿಟಿಎಫ್‌ಐ, ಈ ಬಾರಿಯ ಅರ್ಜುನ ಪ್ರಶಸ್ತಿಗೆ, ಸನಿಲ್‌ ಶೆಟ್ಟಿ, ಮಧುರಿಕಾ ಪಾಟ್ಕರ್‌ ಮತ್ತು ಸುತೀರ್ಥ ಮುಖರ್ಜಿ ಅವರ ಹೆಸರನ್ನು ನಾಮನಿರ್ದೇಶನ ಮಾಡಿದೆ ಎಂದು ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.