ADVERTISEMENT

ಥೈಲ್ಯಾಂಡ್‌ನಲ್ಲಿ ಕುಸ್ತಿ ಚಾಂಪಿಯನ್‌ಶಿಪ್‌: ಬಸವಕಲ್ಯಾಣದ ಉಮೇಶಗೆ ‘ಚಿನ್ನ’

ನಾಡಿನ ಕೀರ್ತಿ ಹೆಚ್ಚಿಸಿದ ಕೊಹಿನೂರನ ಕೂಲಿ ಕಾರ್ಮಿಕನ ಮಗ

ಮಾಣಿಕ ಆರ್ ಭುರೆ
Published 9 ಜೂನ್ 2022, 4:12 IST
Last Updated 9 ಜೂನ್ 2022, 4:12 IST
ಉಮೇಶ ಜಮಾದಾರ
ಉಮೇಶ ಜಮಾದಾರ   

ಬಸವಕಲ್ಯಾಣ: ತಾಲ್ಲೂಕಿನ ಕೊಹಿನೂರ ಗ್ರಾಮದ ಕೂಲಿ ಕಾರ್ಮಿಕರ ಮಗ ಉಮೇಶ ಜಮಾದಾರ ಥೈಲ್ಯಾಂಡ್‌ನಲ್ಲಿ ಈಚೆಗೆ ನಡೆದ ಸೌತ್ ಏಷ್ಯನ್ ಇಂಟರ್ ನ್ಯಾಷನಲ್ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.

ಅಲ್ಲಿ ಭಾರತವನ್ನು ಪ್ರತಿನಿಧಿಸಿದ ಉಮೇಶ 65 ಕೆ.ಜಿ ವಿಭಾಗದಲ್ಲಿ ಪದಕ ಪಡೆದುಕೊಂಡಿದ್ದಾರೆ. ಥೈಲ್ಯಾಂಡ್, ಇಂಡೋನೆಷ್ಯಾ, ಸಿಂಗಾಪುರ, ನೇಪಾಳ ದೇಶಗಳ ಪೈಲ್ವಾನರೊಂದಿಗೆ ಸೆಣಸಾಡಿ ಅಂತಿಮ ಹಂತಕ್ಕೆ ಬಂದು ತಲುಪಿದರು. ಕೊನೆಗೆ ಮಲೇಷ್ಯಾದ ಕುಸ್ತಿಪಟುವನ್ನು 10-00 ಅಂಕಗಳೊಂದಿಗೆ ಬಗ್ಗುಬಡಿದು ವಿಜೇತರಾದರು.

ತಂದೆ ಬಾಬುರಾವ್ ಮತ್ತು ತಾಯಿ ಅಂಬವ್ವ ಕೂಲಿ ಕಾರ್ಮಿಕರಾಗಿ ದುಡಿಯುತ್ತಾರೆ. ಆದ್ದರಿಂದ ಜೀವನ ನಿರ್ವಹಣೆ ಕಷ್ಟ ಆಗಿತ್ತು. ಅಲ್ಲದೆ ಈ ಭಾಗದಲ್ಲಿ ಗರಡಿ ಮನೆಗಳು ಕೂಡ ಇರಲಿಲ್ಲ. ಕಾರಣ ಎಸ್ಸೆಸ್ಸೆಲ್ಸಿ ನಂತರ ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ನಲ್ಲಿ ಪ್ರವೇಶ ಪಡೆದು ಅಲ್ಲಿಯೇ ಪದವಿ ವ್ಯಾಸಂಗ ಮಾಡುತ್ತ ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುವಾಗಿ ಬೆಳೆದಿದ್ದಾರೆ.

ADVERTISEMENT

ಈ ಮೊದಲು ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಕಾಲೇಜು ಕ್ರೀಡಾಕೂಟದಲ್ಲಿ ಒಮ್ಮೆ ಚಿನ್ನ ಮತ್ತು ಇನ್ನೊಮ್ಮೆ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ರಾಜ್ಯಮಟ್ಟದ 55 ಕೆ.ಜಿ.ಬೆಲ್ಟ್ ರೆಸಲಿಂಗ್ ಸ್ಪರ್ಧೆಯಲ್ಲಿ, ಆಳ್ವಾಸ್ ನುಡಿಸಿರಿ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಬಾಚಿಕೊಂಡಿದ್ದಾರೆ. ಕೊಹಿನೂರದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಮತದಾನ ಜಾಗೃತಿ ಕುಸ್ತಿ ಸ್ಪರ್ಧೆಯಲ್ಲೂ ವಿಜೇತರಾಗಿದ್ದರು.

‘ಕ್ರೀಡಾ ವಸತಿ ನಿಲಯ ಸೇರಿಕೊಂಡಿದ್ದು, ಅಲ್ಲಿ ಪ್ರತಿದಿನ ಬೆಳಿಗ್ಗೆ 5 ರಿಂದ 8 ಗಂಟೆಯವರೆಗೆ ಮತ್ತು ಸಂಜೆ 4 ರಿಂದ 7 ಗಂಟೆಯವರೆಗೆ ತರಬೇತಿ ಪಡೆಯುತ್ತೇನೆ. ಅಲ್ಲಿ ಉತ್ತಮ ಊಟವೂ ದೊರೆಯುತ್ತದೆ. ಇನ್ನುಮುಂದೆ ಕಾಮನವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸುವುದಕ್ಕಾಗಿ ಸಿದ್ಧತೆ ನಡೆಸಿದ್ದೇನೆ’ ಎಂದು ಉಮೇಶ ಹೇಳುತ್ತಾರೆ.

‘ಉಮೇಶ ಚಿಕ್ಕಂದಿನಿಂದಲೇ ಕುಸ್ತಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಗ್ರಾಮದ ಹಾಗೂ ಸುತ್ತಲಿನ ಗ್ರಾಮಗಳ ಜಾತ್ರೆಗಳಲ್ಲಿನ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾರೆ.

ಪ್ರೌಢಶಾಲೆ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದರು.

ಓಲಂಪಿಕ್ ಗೇಮ್ಸ್‌ನಲ್ಲೂ ಮಿಂಚುವ ಸಾಮರ್ಥ್ಯ ಅವರಲ್ಲಿದೆ’ ಎಂದು ಶಿಕ್ಷಕ ಹಣಮಂತ ಚಾಂದೂರೆ ಹೇಳಿದ್ದಾರೆ. ‘ಉಮೇಶನ ಸಾಧನೆಯಿಂದ ಕೊಹಿನೂರನ ಕೀರ್ತಿ ಹೆಚ್ಚಿದೆ. ತಾಲ್ಲೂಕಿನ ಜನರಿಗೂ ಹರ್ಷವಾಗಿದ್ದು, ವಿವಿಧೆಡೆ ಆತನನ್ನು ಸನ್ಮಾನಿಸಲಾಗಿದೆ. ಅವರು ಇನ್ನೂ ಹೆಚ್ಚಿನ ಸಾಧನೆಗೈಯಲು ಅಗತ್ಯವಿರುವ ಸೌಲಭ್ಯ ದೊರಕಿಸುವುದಕ್ಕೆ ಪ್ರಯತ್ನಿಸಲಾಗುತ್ತಿದೆ’ ಎಂದು ಗ್ರಾಮದ ಮುಖಂಡ ರತಿಕಾಂತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.