ADVERTISEMENT

ಕೋವಿಡ್‌: ಯುಟಿಟಿ ಟೂರ್ನಿ ಮುಂದೂಡಿಕೆ

ಟೇಬಲ್‌ ಟೆನಿಸ್‌

ಪಿಟಿಐ
Published 11 ಆಗಸ್ಟ್ 2020, 14:27 IST
Last Updated 11 ಆಗಸ್ಟ್ 2020, 14:27 IST
2019ರ ಅಲ್ಟಿಮೇಟ್‌ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತದ ಅಚಂತ ಶರತ್‌ ಕಮಲ್‌–ಪಿಟಿಐ ಚಿತ್ರ
2019ರ ಅಲ್ಟಿಮೇಟ್‌ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತದ ಅಚಂತ ಶರತ್‌ ಕಮಲ್‌–ಪಿಟಿಐ ಚಿತ್ರ   

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯಬೇಕಾಗಿದ್ದ ಅಲ್ಟಿಮೇಟ್‌ ಟೇಬಲ್‌ ಟೆನಿಸ್‌ (ಯುಟಿಟಿ) ಟೂರ್ನಿಯನ್ನು ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆಗಸ್ಟ್‌ 14ರಿಂದ 31ರವರೆಗೆ ಈ ಟೂರ್ನಿ ನಡೆಯಬೇಕಿತ್ತು.

ದೇಶದಲ್ಲಿ ಇನ್ನೂ ಕ್ರೀಡಾಕೂಟಗಳು ಪ್ರಾರಂಭವಾಗದ ಕಾರಣ ಮತ್ತು ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್‌ನ (ಐಟಿಟಿಎಫ್) ವೃತ್ತಿಪರ ಪ್ರವಾಸದ ಪುನರಾರಂಭದ ಬಗ್ಗೆ ಇನ್ನೂ ಖಚಿತವಾಗಿಲ್ಲವಾದ್ದರಿಂದ, ಟೂರ್ನಿಯನ್ನು ಮುಂದೂಡುವುದು ಅನಿವಾರ್ಯವಾಗಿತ್ತು.

2017ರಲ್ಲಿ ಯುಟಿಟಿ ಟೂರ್ನಿ ಆರಂಭವಾಗಿತ್ತು. ಈ ವರ್ಷ ನಿಗದಿಯಾಗಿದ್ದ ಟೋಕಿಯೊ ಒಲಿಂಪಿಕ್ಸ್( ಮುಂದೂಡಿಕೆಯಾಗಿದೆ)‌ ಬಳಿಕ ಇದು ನಡೆಯಬೇಕಿತ್ತು. ಇನ್ನು ಮುಂದಿನ ವರ್ಷವೇ ಯುಟಿಟಿ ನಡೆಯಲಿದೆ.

ADVERTISEMENT

‘ಟೂರ್ನಿ ಆಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುಮತಿ ಬೇಕು. ಆಟಗಾರರ ಲಭ್ಯತೆ ಮತ್ತು ಐಟಿಟಿಎಫ್‌ನೊಂದಿಗೆ ಚರ್ಚೆ ನಡೆಯಬೇಕಿದೆ. ಟೂರ್ನಿ ನಡೆಸುವುದು ಸದ್ಯಕ್ಕೆ ಕಷ್ಟ‘ ಎಂದು ಮಾಜಿ ಆಟಗಾರ ಹಾಗೂ ಯುಟಿಟಿಯ ಪ್ರವರ್ತಕ ಕಮಲೇಶ್‌ ಮೆಹ್ತಾ ಹೇಳಿದ್ದಾರೆ.

‘ಅಂತರರಾಷ್ಟ್ರೀಯ ಟೂರ್ನಿಗಳ ವೇಳಾಪಟ್ಟಿಯನ್ನು ನೋಡಿಕೊಂಡು ಯುಟಿಟಿ ಟೂರ್ನಿಯ ಹೊಸ ದಿನಾಂಕವನ್ನು ನಿರ್ಧರಿಸಬೇಕಿದೆ. ಈ ವರ್ಷ ಟೂರ್ನಿ ನಡೆಯುವುದಿಲ್ಲ. ಕಾಯ್ದು ನೋಡುತ್ತೇವೆ‘ ಎಂದು ಮೆಹ್ತಾ ನುಡಿದರು.

ಟೂರ್ನಿಯಿಂದ ಚೀನಾದ ಆಟಗಾರರು ದೂರ ಉಳಿದಿದ್ದಾರೆ. ಜರ್ಮನಿ, ಸ್ವೀಡನ್‌, ಚೀನಾ ತೈಪೆ, ಹಾಂಗ್‌ಕಾಂಗ್‌ ಹಾಗೂ ಪೋರ್ಚುಗಲ್‌ ದೇಶಗಳ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.